ನವದೆಹಲಿ:ಕೇಂದ್ರ ಹಣಕಾಸು ಬಜೆಟ್ಗೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಆಡಳಿತ ಪಕ್ಷದವರು ಬಜೆಟ್ ಸಮರ್ಥಿಸಿಕೊಂಡರೆ, ವಿಪಕ್ಷಗಳು ಬಜೆಟ್ ಕುರಿತು ವ್ಯಂಗ್ಯವಾಡಿವೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ತಮ್ಮ ಬಜೆಟ್ ಅನ್ನು ರಾಜ್ಯಸಭೆಯಲ್ಲಿ ಸಮರ್ಥಿಸಿಕೊಂಡರು.
ನಾವು ನಿರಂತರತೆ ಬೆಳವಣಿಗೆಗೆ ಸಹಕಾರಿಯಾಗುವಂಥ ಬಜೆಟ್ ಮಂಡಿಸಿದ್ದೇವೆ. ಈ ಬಜೆಟ್ ದೇಶದ ಆರ್ಥಿಕತೆಗೆ ಸ್ಥಿರತೆ ಮತ್ತು ತೆರಿಗೆ ವಿಚಾರದಲ್ಲಿ ದೇಶಕ್ಕೆ ಸಹಕಾರಿಯಾಗುತ್ತದೆ. ಸ್ವಾತಂತ್ರ್ಯಗಳಿಸಿ ನೂರು ವರ್ಷದಲ್ಲಿ ಸಾಧಿಸಬೇಕಾದ ಗುರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ನಿರ್ಮಲಾ ವಿವರಿಸಿದರು.
ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಿಂದ ಬರುವ ಮಾರ್ಗದರ್ಶನವು ಅತ್ಯಂತ ಮುಖ್ಯವಾಗಿದೆ. ಅದು ಎಲ್ಲವನ್ನೂ ಒಟ್ಟಿಗೆ ತರುತ್ತದೆ ಎಂದಿರುವ ಅವರು, ಭಾರತದ ಕೃಷಿಯನ್ನು ಸುಧಾರಿಸಲು ಮತ್ತು ಆಧುನೀಕರಿಸಲು ಡ್ರೋನ್‌ಗಳನ್ನು ಸಾಧನವಾಗಿ ಅಥವಾ ಅತ್ಯಂತ ಪರಿಣಾಮಕಾರಿ ಬಳಸಿಕೊಳ್ಳಲಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಡ್ರೋನ್‌ಗಳ ಮೂಲಕ, ನಾವು ರಸಗೊಬ್ಬರ, ಕೀಟನಾಶಕಗಳ ಬಳಕೆಯಲ್ಲಿ ದಕ್ಷತೆಯನ್ನು ತರಲು ಸಾಧ್ಯವಾಗುತ್ತದೆ ಮತ್ತು ಬೆಳೆ ಮೌಲ್ಯಮಾಪನ ಮಾಡಲು ಮತ್ತು ಫಸಲನ್ನು ಎಷ್ಟು ಬರಬಹುದು ಎಂದು ಊಹಿಸಲೂ ಸಾಧ್ಯವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
100ನೇ ವರ್ಷದ ದೂರದೃಷ್ಟಿ ಅಗತ್ಯ: ಮುಂಬರುವ 25 ವರ್ಷಗಳು ಭಾರತಕ್ಕೆ ಅತ್ಯಂತ ಮಹತ್ವದ ವರ್ಷಗಳಾಗಿವೆ. ನಾವು ಇದನ್ನು 'ಅಮೃತ ಕಾಲ' ಎಂದು ಕರೆಯುವುದಕ್ಕೆ ಯಾವುದೇ ಆಶ್ಚರ್ಯ ಪಡಬೇಕಿಲ್ಲ. ನಮಗೆ '100ನೇ ವರ್ಷದಲ್ಲಿ' ಭಾರತ ಹೇಗಿರುತ್ತದೆ ಎಂಬ ದೃಷ್ಟಿ ಇಲ್ಲದಿದ್ದರೆ, ನಾವು ಮೊದಲ 70 ವರ್ಷಗಳಂತೆಯೇ ಕಾಲ ಕಳೆಯಬೇಕಾಗುತ್ತದೆ. 65 ವರ್ಷಗಳು ಆಡಳಿತ ನಡೆಸಿದ ಕಾಂಗ್ರೆಸ್ ತಮ್ಮ ಕುಟುಂಬದ ಒಳಿತಿಗಾಗಿ ಬಿಟ್ಟರೇ ಬೇರೆ ಯಾವುದೇ ದೂರದೃಷ್ಟಿ ಹೊಂದಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಹಣ ದುರುಪಯೋಗ: ಪತ್ರಕರ್ತೆ ರಾಣಾ ಆಯುಬ್ ಬ್ಯಾಂಕ್ ಅಕೌಂಟ್ ಲಾಕ್ ಮಾಡಿದ ಇಡಿ
ನಾವು ಆಧುನಿಕ ಭಾರತಕ್ಕಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲು ಸಾರ್ವಜನಿಕ ವೆಚ್ಚವನ್ನು ಹೆಚ್ಚು ಮಾಡಲು ಬಯಸಿದ್ದೇವೆ. ಮುಂಬರುವ 25 ವರ್ಷಗಳಲ್ಲಿ ನಿರ್ಮಾಣವಾಗುವ ಮೂಲಸೌಕರ್ಯಗಳನ್ನು ಹೆಚ್ಚು ಮಾಡಲು ನಾವು ಯೋಚಿಸಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕಾಂಗ್ರೆಸ್ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುತ್ತಿರಲಿಲ್ಲ:ಬಿಜೆಪಿಗಿಂತ ಮೊದಲು ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರವು ಶೇಕಡಾ 9.1ರಷ್ಟು ಆಗಿತ್ತು. ಈಗ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಿದೆ. ನಾವು ಆರ್ಥಿಕ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ವಿರೋಧ ಪಕ್ಷವು ಈಗ ಆಡಳಿತ ಪಕ್ಷವಾಗಿದ್ದರೆ, ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಕುರಿತು ವ್ಯಂಗ್ಯವಾಡಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಕಾಂಗ್ರೆಸ್ ಕಾಲದಲ್ಲಿಯೇ ಆಗಿದ್ದರೂ, ದುರುಪಯೋಗವೂ ಕೂಡಾ ಅವರ ಕಾಲದಲ್ಲೇ ಹೆಚ್ಚಾಗಿದೆ. ನಕಲಿ ಖಾತೆಗಳ ಹಾವಳಿಯೂ ಉದ್ಯೋಗಖಾತ್ರಿ ಯೋಜನೆಯಲ್ಲಿ ಹೆಚ್ಚಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯ ದುರುಪಯೋಗದ ಸಂಪೂರ್ಣ ಕ್ರೆಡಿಟ್ ಕಾಂಗ್ರೆಸ್ಗೇ ಸಲ್ಲಬೇಕು. ನಾವು ಯೋಜನೆಯನ್ನು ಪಾರದರ್ಶಕವಾಗಿ ಮತ್ತು ಸರಿಯಾಗಿ ಬಳಸುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.