ಕರ್ನಾಟಕ

karnataka

ETV Bharat / bharat

ಹೈದರಾಬಾದ್: ಆಲಿಕಲ್ಲು ಮಳೆಯಿಂದ ಇಂಡಿಗೋ ವಿಮಾನಕ್ಕೆ ಹಾನಿ

ಅಹಮದಾಬಾದ್‌ನಿಂದ ಹೊರಟಿದ್ದ ಇಂಡಿಗೋ ವಿಮಾನ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಆಲಿಕಲ್ಲು ಮಳೆಗೆ ಸಿಲುಕಿದೆ.

Flight from Ahmedabad hit by hailstorm
ಆಲಿಕಲ್ಲು ಮಳೆಗೆ ಸಿಲುಕಿದ ವಿಮಾನ

By

Published : Mar 21, 2023, 10:11 AM IST

ಹೈದರಾಬಾದ್:ಅಹಮದಾಬಾದ್‌ನಿಂದ ಟೇಕ್‌ ಆಫ್‌ ಆಗಿದ್ದ ಇಂಡಿಗೋ ಸಂಸ್ಥೆಯ ವಿಮಾನ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಆಲಿಕಲ್ಲು ಮಳೆಗೆ ಸಿಲುಕಿ ಹಾನಿಗೊಳಗಾಗಿದೆ. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವಿಮಾನಕ್ಕೆ ಹಾನಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಆಲಿಕಲ್ಲು ಮಳೆಯಿಂದ ವಿಮಾನದ ರೇಡೋಮ್ ಮತ್ತು ವಿಂಡ್‌ಶೀಲ್ಡ್‌ಗಳಿಗೆ ಹಾನಿಯಾಗಿದೆ. ಆದರೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. 6E 6594 ವಿಮಾನ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಶಂಶಾಬಾದ್‌ನ ವಿಮಾನ ನಿಲ್ದಾಣದ ಕಡೆ ಬರುತ್ತಿದ್ದಾಗ ದಿಢೀರ್ ಆಲಿಕಲ್ಲು ಮಳೆ ಸುರಿದಿದೆ. ಶನಿವಾರ ಹೈದರಾಬಾದ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಾಗಿದೆ. ವಿಮಾನದ ಹಾನಿಗೊಳಗಾದ ಭಾಗಗಳನ್ನು ನಂತರ ಬದಲಾಯಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಆಲಿಕಲ್ಲು ಮಳೆಗೆ ಸಿಲುಕಿದ ವಿಮಾನ

ಬೆಳೆ ಹಾನಿ: ಕಳೆದಗುರುವಾರ (ಮಾ.16) ಮಧ್ಯಾಹ್ನ ತೆಲಂಗಾಣದ ಹಲವೆಡೆ ಆಲಿಕಲ್ಲು ಮಳೆ ಸುರಿದಿದ್ದು, ಬೆಳೆ ನಷ್ಟವಾಗಿದೆ. ಸಂಗಾರೆಡ್ಡಿ, ವಿಕಾರಾಬಾದ್, ರಂಗಾರೆಡ್ಡಿ, ಮೇಡ್ಚಲ್-ಮಲ್ಕಾಜ್‌ಗಿರಿ, ನಲ್ಗೊಂಡ ಮತ್ತು ಜಂಟಿ ಮೆಹಬೂಬ್‌ನಗರ ಜಿಲ್ಲೆಗಳೂ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಕಟಾವಿಗೆ ಬಂದಿದ್ದ ಬೆಳೆ ಹಾಗೂ ತರಕಾರಿ ನೀರು ಪಾಲಾಗಿವೆ. ವಿಕಾರಾಬಾದ್ ಮತ್ತು ನಲ್ಗೊಂಡ ಜಿಲ್ಲೆಯ ನಾಂಪಲ್ಲಿ ಮಂಡಲದಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ಹಲವಾರು ವಾಹನಗಳು ಮತ್ತು ಮನೆಗಳು ಗಾಜುಗಳು ಜಖಂಗೊಂಡಿವೆ. ಮತ್ತೊಂದೆಡೆ, ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ರಾಜಧಾನಿ ಹೈದರಾಬಾದ್​ನ ಹಲವಾರು ಪ್ರದೇಶಗಳಲ್ಲೂ ಭಾರಿ ಮಳೆಯಾಗಿದ್ದು, ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಮೂರು ವಿಮಾನಗಳು ಲ್ಯಾಂಡ್​ ಆಗುವುದು ಸ್ಥಗಿತಗೊಂಡಿತ್ತು.

ಮಳೆ ಹಾನಿ ಕುರಿತು ಮಾಹಿತಿ ನೀಡಿರುವ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಬೆಳೆ ಹಾನಿಯಿಂದಾಗಿ ಸಂಗಾರೆಡ್ಡಿ ಮತ್ತು ವಿಕಾರಾಬಾದ್ ಜಿಲ್ಲೆಗಳಿಂದ ಹೈದರಾಬಾದ್ ನಗರಕ್ಕೆ ತರಕಾರಿ ಪೂರೈಸಲು ತೊಡಕಾಗಿದೆ. ಸಂಗಾರೆಡ್ಡಿ ಜಿಲ್ಲೆಯ ಮುನಿಪಲ್ಲಿ, ಜಹಿರಾಬಾದ್, ಕೋಹಿರ್, ವಿಕಾರಾಬಾದ್ ಜಿಲ್ಲೆಯ ಮಾರ್ಪಳ್ಳಿ, ಮೋಮಿನಪೇಟ್ ಮಂಡಲದಲ್ಲಿ 1000 ಎಕರೆ ಪ್ರದೇಶದಲ್ಲಿ ಈರುಳ್ಳಿ, 500 ಎಕರೆಯಲ್ಲಿ ತರಕಾರಿ, 250 ಎಕರೆ ಮಾವು ಮತ್ತು 50 ಎಕರೆ ಜಮೀನಿನಲ್ಲಿದ್ದ ಪಪ್ಪಾಯಿ ಬೆಳೆ ನಾಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಮಳೆ: ಮಾ.16ರ ಮುಂಜಾನೆ ರಾಷ್ಟ್ರ ರಾಜಧಾನಿ ನವದೆಹಲಿಯ ಕೆಲವು ಭಾಗಗಳು ಮತ್ತು ಅಕ್ಕಪಕ್ಕದ ಎನ್‌ಸಿಆರ್‌ ಪ್ರದೇಶಗಳಲ್ಲಿ ಮಳೆ ಸಿಂಚನವಾಗಿದ್ದು, ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಿತ್ತು. ಮಾರ್ಚ್ 17 ರಿಂದ 20 ರ ವರೆಗೆ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಲಘು /ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಶುಕ್ರವಾರವೇ ಹೇಳಿತ್ತು.

ಇದನ್ನೂ ಓದಿ:ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಸಿಂಚನ: ಆಲಿಕಲ್ಲು ಮಳೆಗೆ ತೆಲಂಗಾಣದಲ್ಲಿ ಬೆಳೆ ಹಾನಿ

ABOUT THE AUTHOR

...view details