ಬಕ್ಸಾರ್ (ಬಿಹಾರ):ಬಕ್ಸಾರ್ ಜಿಲ್ಲೆಯ ಆ್ಯಂಬುಲೆನ್ಸ್ ವಿವಾದ ಪ್ರಕರಣ ಸಂಬಂಧ ವರದಿ ಮಾಡಿದ್ದ ಕಾರಣಕ್ಕಾಗಿ ಈಟಿವಿ ಭಾರತ್ ವರದಿಗಾರ ಉಮೇಶ್ ಪಾಂಡೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಬಿಜೆಪಿ ಮುಖಂಡ ಮತ್ತು ಬಕ್ಸಾರ್ ವಿಧಾನಸಭೆಯ ಮಾಜಿ ಅಭ್ಯರ್ಥಿ ಪರಶುರಾಮ್ ಚತುರ್ವೇದಿ ದೂರು ನೀಡಿದ್ದು, 10 ಪುಟಗಳ ಪ್ರಥಮ ವರ್ತಮಾನ ಮಾಹಿತಿ (ಎಫ್ಐಆರ್)ಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಐಪಿಸಿ ಸೆಕ್ಷನ್ 500, 506, 290, 420 ಮತ್ತು 34 ರ ಅಡಿಯಲ್ಲಿ ಬಕ್ಸಾರ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದ ಕುರಿತಾಗಿ, 14 ಮೇ 2021 ರಂದು ಈಟಿವಿ ಭಾರತ್ ಬಕ್ಸಾರ್‌ನಿಂದ ವಿವರವಾದ ವರದಿಯೊಂದನ್ನು ಪ್ರಕಟಿಸಿತ್ತು. 'ಸಾರ್ವಜನಿಕರಿಗೆ ಮೋಸ! 5 ಹಳೆಯ ಆ್ಯಂಬುಲೆನ್ಸ್‌ಗಳಿಗೆ ಹೊಸ ಸ್ಟಿಕ್ಕರ್‌ಗಳನ್ನು ಅಂಟಿಸಿ ಅಶ್ವಿನಿ ಚೌಬೆ 2ನೇ ಬಾರಿಗೆ ಉದ್ಘಾಟಿಸಲಿದ್ದಾರೆ' ಎಂಬ ಸುದ್ದಿ ಪ್ರಕಟವಾಗಿತ್ತು. ಈ ಬಳಿಕ ರಾಜ್ಯದಲ್ಲಿ ಕೋಲಾಹಲ ಉಂಟಾಗಿತ್ತು.
2ನೇ ಬಾರಿ ಅಲ್ಲ 4ನೇ ಬಾರಿ ಉದ್ಘಾಟನೆ
ಮೊದಲು ಹಳೆಯ ಆ್ಯಂಬುಲೆನ್ಸ್‌ಗಳನ್ನು 2ನೇ ಬಾರಿ ಉದ್ಘಾಟನೆ ಮಾಡಲಾಯಿತು ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಈ ಆ್ಯಂಬುಲೆನ್ಸ್ಗಳು 4ನೇ ಬಾರಿ ಉದ್ಘಾಟನೆಗೊಂಡಿವೆ ಎಂದು ತಿಳಿದುಬಂದಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಇವೇ ಆ್ಯಂಬುಲೆನ್ಸ್ಗಳು ವರ್ಚುವಲ್ನಲ್ಲಿಯೂ ಉದ್ಘಾಟನೆಯಾಗಿರುವುದು ಪತ್ತೆಯಾಗಿತ್ತು.
ಪರಶುರಾಮ್ ಚತುರ್ವೇದಿ ಹೇಳುವುದೇನು?
ವರದಿಗಾರ ಉಮೇಶ್ ಪಾಂಡೆ ವಿರುದ್ಧ ದೂರು ದಾಖಲಿಸಿರುವ ಬಿಜೆಪಿ ಮುಖಂಡ ಪರಶುರಾಮ್ ಚತುರ್ವೇದಿ ಪ್ರತಿಕ್ರಿಯಿಸಿದ್ದು, ವರದಿಗಾರ ಪಾಂಡೆ ಸಚಿವ ಅಶ್ವಿನಿ ಚೌಬೆ ಅವರನ್ನು ಬೆದರಿಸುತ್ತಿದ್ದಾರೆ. ಅಲ್ಲದೆ ಸಚಿವರು ಮತ್ತು ಬಿಜೆಪಿಯ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನೋಂದಣಿಯೇ ಆಗಿಲ್ಲವಂತೆ ಆ್ಯಂಬುಲೆನ್ಸ್ !
ಹಗರಣದ ಬಗ್ಗೆ ಮತ್ತಷ್ಟು ಮಾಹಿತಿ ಜಾಲಾಡುತ್ತಿರುವ ಈಟಿವಿ ಭಾರತ್ ಒಂದೊಂದೇ ಎಳೆಯನ್ನು ಬಯಲಿಗಳೆಯುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ನಾಲ್ಕನೇ ಬಾರಿ ಉದ್ಘಾಟನೆಗೊಂಡಿರುವ ಆ್ಯಂಬುಲೆನ್ಸ್ಗಳು ಇದುವರೆಗೆರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದಲ್ಲಿ ನೋಂದಣಿಯೇ ಆಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸಾರಿಗೆ ಅಧಿಕಾರಿ ಮನೋಜ್ ರಾಜಕ್, ಆಗಸ್ಟ್ 2020 ರಲ್ಲಿ ಬಿಎಸ್ -4 ಮಾದರಿಯ ವಾಹನಗಳನ್ನು ನೋಂದಾಯಿಸುವುದನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ. ಹಾಗಾಗಿ, ನೋಂದಣಿ ಮಾಡಲು ಅವಕಾಶ ನೀಡಿಲ್ಲ ಎನ್ನುತ್ತಿದ್ದಾರೆ.
ನೋಂದಾಯಿಸದ ವಾಹನಗಳಿಂದ ಅಪಘಾತ ಸಂಭವಿಸಿದರೆ, ಅದನ್ನು ನಿರ್ವಹಿಸುತ್ತಿರುವ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಈ ತರದ ವಾಹನಗಳು ಓಡಾಡುತ್ತಿದ್ದರೆ ಅದನ್ನು ವಶಪಡಿಸಿಕೊಳ್ಳಲಾಗುವುದು ಎಂದು ರಾಜಕ್ ಹೇಳಿದ್ದಾರೆ.
ಪ್ರತಿಪಕ್ಷಗಳಿಂದ ಖಂಡನೆ: ಈಟಿವಿ ಭಾರತ್‌ಗೆ ಬೆಂಬಲ
ಸಚಿವರ ಕಳ್ಳಾಟದ ವಿಷಯ ಹೊರಬರುತ್ತಿದ್ದಂತೆ ಅನೇಕ ಪ್ರತಿಪಕ್ಷ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಹಾರ ವಿಧಾನಸಭೆಯ ಪ್ರತಿಪಕ್ಷ ನಾಯಕ ಮತ್ತು ಆರ್‌ಜೆಡಿ ಮುಖ್ಯಸ್ಥರ ತೇಜಸ್ವಿ ಯಾದವ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಸಚಿವರು ಆ್ಯಂಬುಲೆನ್ಸ್‌ಗಳನ್ನು ಉದ್ಘಾಟನೆಗಾಗಿ ಮಾತ್ರ ಬಕ್ಸಾರ್‌ಗೆ ತಂದು ವಾಪಸ್ ತೆಗೆದುಕೊಂಡು ಹೋಗುತ್ತಾರೆ. ಮತ್ತೊಮ್ಮೆ ತರುವುದು ಮುಂದಿನ ವರ್ಷದ ಉದ್ಘಾಟನೆಗೆ ಎಂದು ಟ್ವೀಟ್ ಮಾಡಿದ್ದಾರೆ. ಈಟಿವಿ ಭಾರತ್ ವರದಿಯನ್ನು ಲಗತ್ತಿಸಿದ್ದಾರೆ.
ಸದರ್ನ ಕಾಂಗ್ರೆಸ್ ಶಾಸಕ ಸಂಜಯ್ ತಿವಾರಿ ಪ್ರತಿಕ್ರಿಯಿಸಿ, ಧನುಷ್ ಫೌಂಡೇಶನ್‌ಗೆ ಆ್ಯಂಬುಲೆನ್ಸ್ ನೀಡಿ, ಜನ ರೋಗಿಗಳನ್ನು ಹೆಗಲ ಮೇಲೆ ಆಸ್ಪತ್ರೆಗಳಿಗೆ ಹೊತ್ತುಕೊಂಡು ಹೋಗುವಂತೆ ಮಾಡಿದ ಅಶ್ವಿನಿ ಚೌಬೆಯೇ ಎಲ್ಲಾ ಕೋವಿಡ್ ಸಾವುಗಳಿಗೆ ಕಾರಣ ಎಂದು ಎಂದಿದ್ದಾರೆ.
ಆರ್‌ಜೆಡಿ ಪಕ್ಷ ಈಟಿವಿ ಭಾರತ್ ಪ್ರತಿನಿಧಿ ಮೇಲೆ ಎಫ್ಐಆರ್ ದಾಖಲಿಸಿರುವುದನ್ನು ತೀವ್ರವಾಗಿ ಖಂಡಿಸಿದೆ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಈಟಿವಿ ಭಾರತ್ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಹೇಳಿದ್ದಾರೆ.
ಈ ಮಧ್ಯೆ, ತೇಜಶ್ವಿ ಯಾದವ್ ಹೇಳಿಕೆ ವಿರುದ್ಧ ಬಿಜೆಪಿ ಮುಖಂಡ ಪರಶುರಾಮ್ ಚತುರ್ವೇದಿ ಪ್ರತಿಕ್ರಿಯಿಸಿದ್ದು, ಅಶ್ವಿನಿ ಚೌಬೆ ಮೊಬೈಲ್ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದ್ದಾರೆಯೇ ಹೊರತು ಆ್ಯಂಬುಲೆನ್ಸ್‌ಗಳನ್ನು ಉದ್ಘಾಟಿಸಿಲ್ಲ. ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಮತ್ತು ಕಾಂಗ್ರೆಸ್ ಮುಖಂಡ ಮುನ್ನಾ ತಿವಾರಿಗೆ ಇದು ತಿಳಿದಿಲ್ಲ ಎಂದಿದ್ದಾರೆ.
ಪ್ರತಿಕ್ರಿಯೆಗೆ ಸಿಗದ ಅಶ್ವಿನಿ ಚೌಬೆ:
ಇನ್ನು, ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಈಟಿವಿ ಭಾರತ್ ಪ್ರತಿನಿಧಿ ಸಚಿವಅಶ್ವಿನಿ ಚೌಬೆ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ, ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.