ನವದೆಹಲಿ: ಕೇಂದ್ರ ಸರ್ಕಾರ ಕಳೆದ ವರ್ಷ ರೂಪಿಸಿ ಇದೀಗ ರೈತರ ಹಿತದೃಷ್ಟಿಯಿಂದ ವಾಪಸ್ ಪಡೆಯುವುದಾಗಿ ಹೇಳಿರುವ 3 ಕೃಷಿಕಾಯ್ದೆ (ತಿದ್ದುಪಡಿ)ಗಳ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಒಂದು ವರ್ಷವಾಗಿದೆ.
ಪ್ರತಿಭಟನೆಯ ಮೊದಲ ವರ್ಷಾಚರಣೆಗೆ ಪಂಜಾಬ್, ಹರಿಯಾಣ ಸೇರಿ ಹಲವು ಭಾಗದ ರೈತರು ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಭಾಗಕ್ಕೆ ಹಿಂತಿರುಗಿದ್ದು, ಈ ದಿನವನ್ನು ಆಚರಿಸುವ ಮೂಲಕ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭಕ್ಕೂ ಮುನ್ನ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ.
ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವದ ನಿಮಿತ್ತ ಇಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆ, ದೆಹಲಿ ಗಡಿಯಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಇಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲವೆಡೆ ಪ್ರತಿಭಟನೆ:
ರೈತ ಮುಖಂಡರು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಖಚಿತಪಡಿಸಿವೆ. ದೆಹಲಿಯ ಹೊರತಾಗಿ, ಕರ್ನಾಟಕ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದ ವಿವಿಧ ಭಾಗಗಳು ಸೇರಿದಂತೆ ರೈತರು ಹಲವೆಡೆ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಎಲ್ಲ ಕಡೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.