ಸೋನಿಪತ್(ಹರಿಯಾಣ):ಪ್ರಧಾನಮಂತ್ರಿ ನರೇಂದ್ರ ಮೋದಿ(Prime Minister Narendra Modi) ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ(Repealing of farm laws) ಘೋಷಿಸಿದ್ದು, ರೈತರ ಮುಂದಿನ ಹೋರಾಟ ಮತ್ತು ಬೇಡಿಕೆಗಳ ಬಗ್ಗೆ ಚರ್ಚಿಸಲು ಸಿಂಘು ಗಡಿಯಲ್ಲಿ ಕಿಸಾನ್ ಮೋರ್ಚಾ ಒಕ್ಕೂಟದ ಸಭೆ (Farmers meeting at Singhu border) ಇಂದು ನಡೆದಿದೆ.
ಸಿಂಘು ಗಡಿಯಲ್ಲಿ ನಡೆಯುತ್ತಿರುವ ಈ ಸಭೆಗೆ ರೈತ ಮುಖಂಡ, ರೈತ ಹೋರಾಟದ ಮುಂದಾಳು ರಾಕೇಶ್ ಟಿಕಾಯತ್ ಸೇರಿದಂತೆ ಹಲವಾರು ರೈತ ನಾಯಕರು ಭಾಗಿಯಾಗಿದ್ದಾರೆ.
ಶನಿವಾರ ನಡೆಯಬೇಕಿದ್ದ ಸಭೆ ಕಾರಣಾಂತಗಳಿಂದ ಭಾನುವಾರಕ್ಕೆ ಮುಂದೂಡಲಾಗಿತ್ತು. ಇದರಂತೆ ಸಿಂಘು ಗಡಿಯಲ್ಲಿ ರೈತ ನಾಯಕರೆಲ್ಲರೂ ಸಭೆ ಸೇರಿ ಮುಂದಿನ ಹೋರಾಟ ಮತ್ತು ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆಯ ವೇಳೆ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ತೆಗೆದುಹಾಕುವ, ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಗಳಿಗೆ ಪರಿಹಾರ ಕೊಡಿಸುವ ಬಗ್ಗೆಯೂ ತೀರ್ಮಾನಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದಲ್ಲದೇ, ಬೆಳೆಗಳಿಗೆ ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆಯ ಮುಂದುವರಿಕೆಯ ಬಗ್ಗೆ ಕಾನೂನು ರೂಪಿಸಬೇಕು ಎಂಬ ರೈತರ ಪ್ರಮುಖ ಬೇಡಿಕೆಯನ್ನು ಸಾಕಾರಗೊಳಿಸಲು ಏನೆಲ್ಲಾ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.