ಅಹಮದಾಬಾದ್: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ ಗಂಭೀರ ಆರೋಪದ ಮೇಲೆ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್, ನಿವೃತ್ತ ಪೊಲೀಸ್ ಡಿಜಿಪಿ ಆರ್.ಬಿ. ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧ ವಿಶೇಷ ತನಿಖಾ ದಳ (ಎಸ್‌ಐಟಿ) ಚಾರ್ಜ್ ಶೀಟ್ ದಾಖಲು ಮಾಡಿದೆ.
ಸಾಕ್ಷಿಗಳ ವಿವರಗಳನ್ನೊಳಗೊಂಡ 100 ಪುಟಗಳ ಚಾರ್ಜ್ಶೀಟ್ ಇದಾಗಿದ್ದು, ಇದರೊಂದಿಗೆ ದಾಖಲೆಗಳನ್ನೂ ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
2002 ರ ಗುಜರಾತ್ ಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಸಿಲುಕಿಸಲು ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ತೀಸ್ತಾ ಅವರನ್ನು ಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2 ರಂದು ಮಧ್ಯಂತರ ಜಾಮೀನು ನೀಡಿತ್ತು. ಈ ವಿಷಯದಲ್ಲಿ ಹೈಕೋರ್ಟ್ ವಿಚಾರಣೆ ಮುಗಿಯುವವರೆಗೆ ತನ್ನ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆ ಸುಪ್ರೀಂ ಕೋರ್ಟ್ ಸೆತಲ್ವಾಡ್‌ಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್, ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ತನ್ನ ದೃಷ್ಟಿಯಲ್ಲಿ ಸೆತಲ್ವಾಡ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರಾಗಿದ್ದಾರೆ ಎಂದು ಹೇಳಿತ್ತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 468 (ವಂಚನೆಗಾಗಿ ಫೋರ್ಜರಿ) ಮತ್ತು 194 (ಮರಣದಂಡನೆಯ ಅಪರಾಧಗಳಿಗೆ ಶಿಕ್ಷೆಯನ್ನು ಪಡೆಯುವ ಉದ್ದೇಶದಿಂದ ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸುವುದು) ಅಡಿಯಲ್ಲಿ ಈ ಮೂವರ ದಾಖಲಿಸಲಾದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧಾರದ ಮೇಲೆ ಜೂನ್ 25 ರಂದು ಅಹಮದಾಬಾದ್ ಪೊಲೀಸ್ ಕ್ರೈಂ ಬ್ರಾಂಚ್ ಅವರನ್ನು ಬಂಧಿಸಿತ್ತು.
ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಅಂದಿನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಸೂಚನೆಯ ಮೇರೆಗೆ ನಡೆಸಲಾದ ದೊಡ್ಡ ಪಿತೂರಿಯಲ್ಲಿ ಸೆತಲ್ವಾಡ್ ಮತ್ತು ಶ್ರೀಕುಮಾರ್ ಭಾಗಿಯಾಗಿದ್ದಾರೆ ಎಂದು ಈ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ಎಸ್‌ಐಟಿ ಆರೋಪಿಸಿದೆ.