ಶಿವಗಂಗಾ (ತಮಿಳುನಾಡು): ಈವೆಂಟ್ ಮ್ಯಾನೇಜರ್ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆ ಕುರಿತು ಶಿವಗಂಗಾ ಜಿಲ್ಲಾ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಅವರ ಮಹಿಳಾ ಉದ್ಯೋಗಿಗಳು ಆತನನ್ನು ಹಿಗ್ಗಾ - ಮುಗ್ಗಾ ಥಳಿಸಿದ್ದಾರೆ.
ರಾಜಾ ಎಂಬುವವ ಪುದುಕೊಟ್ಟೈ ಜಿಲ್ಲೆಯವನಾಗಿದ್ದು, ತಂಜಾವೂರು, ಪುದುಕೊಟ್ಟೈ ಮತ್ತು ಶಿವಗಂಗಾ ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಸ್ವಾಗತಕಾರರ (ಅತಿಥಿಗಳಿಗೆ ಸ್ವಾಗತ ನೀಡುವ ಹುಡುಗಿಯರು) ಸೇವೆಗಳನ್ನು ನೀಡುತ್ತಿದ್ದ.
ಇನ್ನು ಈತ ಹೆಚ್ಚಾಗಿ ಈ ಕೆಲಸಕ್ಕೆ ಹದಿಹರೆಯದ ವಯಸ್ಸಿನಲ್ಲಿರುವವರನ್ನೇ ತೆಗೆದುಕೊಳ್ಳುತ್ತಿದ್ದ. ಆದರೆ, ಕೆಲಸಕ್ಕೆ ಬಂದವರನ್ನು ಮಾಂಸ ದಂಧೆಗೆ ಪ್ರೇರೇಪಿಸುತ್ತಿದ್ದ ಎನ್ನಲಾಗಿದೆ.
ಹಿಗ್ಗಾ- ಮುಗ್ಗಾ ಥಳಿಸಿದ ಹುಡುಗಿಯರು ನೊಂದ ಹುಡುಗಿಯರಿಂದ ಟ್ರ್ಯಾಪ್:
ಈತನ ವರ್ತನೆಯಿಂದ ಅಸಮಾಧಾನಗೊಂಡ ಹುಡುಗಿಯರು ತಮ್ಮ ಸಂಬಂಧಿಕರೊಂದಿಗೆ ಸೇರಿ ರಾಜಾಗೆ ಪಾಠ ಕಲಿಸಲು ನಿರ್ಧರಿಸಿದರು. ಅವರು ಕಾರ್ಯಕ್ರಮವೊಂದನ್ನು ಆಯೋಜಿಸುವ ನೆಪದಲ್ಲಿ 20 ಸ್ವಾಗತಕಾರ ಹುಡುಗಿಯರಿಗೆ ರಾಜಾನನ್ನು ಸಂಪರ್ಕಿಸಿದರು. ಹಾಗೆಯೇ ಮುಂಗಡ ಹಣ ಸಂಗ್ರಹಿಸಲು ವೈಯಕ್ತಿಕವಾಗಿ ಭೇಟಿಯಾಗುವಂತೆ ಸಲಹೆ ನೀಡಿದರು.
ಕೇಸ್ ಹಾಕುವ ಬೆದರಿಕೆ ಹಾಕಿದ ಭೂಪ
ರಾಜಾ ಇವರು ಹಾಕಿದ್ದ ಬಲೆಗೆ ಬೀಳುತ್ತಿದ್ದಂತೆ, ಈ ಗುಂಪು ಅವನನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿತು, ಅಲ್ಲಿ ಅತನಿಗೆ ಹಿಡಿದಿದ್ದ ಚಳಿ ಬಿಡಿಸಿದರು. ಆರಂಭದಲ್ಲಿ ಇದ್ಯಾವುದಕ್ಕೂ ಬಗ್ಗದ ರಾಜಾ ಶಿವಗಂಗಾದ ಸಕ್ಕೋಟೈ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ತನ್ನ ಸಂಬಂಧಿಯ ಸಹಾಯ ಕೋರಿದ ನಂತರ ಅಪಹರಣ ಮತ್ತು ಸುಲಿಗೆ ಪ್ರಕರಣವನ್ನು ದಾಖಲಿಸುವುದಾಗಿ ಬೆದರಿಸಿದ.
ಈ ಬೆಳವಣಿಗೆಯಿಂದ ಹೆದರಿದ ಹುಡುಗಿಯರು ರಕ್ಷಣೆ ಕೋರಿ ಮಹಿಳಾ ಆಯೋಗದ ಜೊತೆಗೆ ರಾಜ್ಯ ಮತ್ತು ಜಿಲ್ಲಾ ಪೊಲೀಸ್ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರು. ಇನ್ನು ಪೊಲೀಸರು ಹುಡುಗಿಯರಿಂದ ದೂರುಗಳನ್ನು ಸ್ವೀಕರಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.