ನಾಗ್ಪುರ (ಮಹಾರಾಷ್ಟ್ರ): ನಗರದಲ್ಲಿ ಅಚ್ಚರಿ ರೀತಿಯ ತ್ರಿಕೋನ ಪ್ರೇಮಕಥೆ ಮುನ್ನೆಲೆಗೆ ಬಂದಿದೆ. ಗ್ವಾಲಿಯರ್‌ನ ಯುವತಿಯ ಬಗ್ಗೆ ಕೇಳಿ ಅನೇಕರು ಇದೀಗ ಆಘಾತಕ್ಕೊಳಗಾಗಿದ್ದಾರೆ.
ಮೊದಲ ಬಾರಿಗೆ ತನ್ನ ಕಾಲೋನಿಯಲ್ಲಿ ವಾಸಿಸುವ ಯುವಕನನ್ನು ಮದುವೆಯಾದಳು, ಎರಡನೇ ಬಾರಿಗೆ ಮಿಸ್‌ಕಾಲ್ ಮೂಲಕ ಮತ್ತೊಬ್ಬನನ್ನು ಪ್ರೀತಿಸಿ ವರಿಸಿದ್ದಾಳೆ. ಈಗ ಮೂರನೇ ಬಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾಗಿ ಆತನನ್ನೂ ಪ್ರೀತಿಸಿ 2ನೇ ಗಂಡನನ್ನು ಬಿಟ್ಟೋಡಿದ್ದಾಳೆ.
ವಿವರ: ಗ್ವಾಲಿಯರ್‌ನ 18 ವರ್ಷದ ಯುವತಿ ವಠೋಡಾ ಪ್ರದೇಶದಲ್ಲಿ ವಾಸಿಸಲು ಬಂದಿದ್ದಾಳೆ. ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾಗ ಅಲ್ಲಿನ ನಿವಾಸಿಗಳಲ್ಲಿ ಒಬ್ಬರ ಪರಿಚಯವಾಗಿ ಪ್ರೀತಿಸುತ್ತಿದ್ದಳು. ನೋಂದಣಿ ಕಚೇರಿಯಲ್ಲಿ ವಿವಾಹವೂ ಆಗಿ ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಈ ಮದುವೆಗೆ ಸಾಕ್ಷಿ ಎಂಬಂತೆ ಒಂದು ಮಗು ಕೂಡಾ ಜನಿಸಿದೆ.
ಇದಾದ ನಂತರ ಈಕೆಯ ಮೊಬೈಲ್ಗೆ ಒಂದು ದಿನ ಮಿಸ್‌ಕಾಲ್ ಬಂದಿದೆ. ಆ ಮಿಸ್‌ಕಾಲ್ ಮಾಡಿದವನ ಹೆಸರು ಪವನ್. ಇದೇ ಮಿಸ್ ಕಾಲ್ ತರುವಾಯ ಪ್ರೇಮವಾಗಿ ಮಾರ್ಪಾಡಾಯಿತು. ಯುವಕ ಔರಂಗಾಬಾದ್ ಬಿಟ್ಟು ಈಕೆಗಾಗಿ ನೇರವಾಗಿ ನಾಗ್ಪುರಕ್ಕೆ ಬಂದಿಳಿದ. ಇಬ್ಬರೂ ಭೇಟಿಯಾದಾಗ ಯುವತಿ ತನಗೆ ಈಗಾಗಲೇ ವಿವಾಹವಾಗಿರುವ ಸಂಗತಿಯನ್ನು ಮುಚ್ಚಿಟ್ಟಿದ್ದಾಳೆ.
ಮನಸಾರೆ ಪ್ರೀತಿಸುತ್ತಿದ್ದ ಪವನ್ ಮದುವೆ ಬಗ್ಗೆ ಪ್ರಸ್ತಾಪಿಸಿ ಯುವತಿಯನ್ನು ಕೊನೆಗೂ ದೇವಸ್ಥಾನದಲ್ಲಿ ವಿವಾಹ ಮಾಡಿಕೊಂಡ. ನಂತರ ಇಬ್ಬರೂ ಸೋನೆಗಾಂವ್ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದರು. ಇದರ ನಡುವೆ ನೊಂದು ಬೆಂದ ಮೊದಲ ಪತಿ ಮದ್ಯದ ಚಟಕ್ಕೆ ಬಿದ್ದಿದ್ದಾನೆ.