ಶೋಪಿಯಾನ್(ಜಮ್ಮು ಕಾಶ್ಮೀರ):ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದಲ್ಲಿ ನಾಗರಿಕ ಸಾವುಗಳಿಗೆ ಕಾರಣವಾಗಿದ್ದು, ಅತ್ಯಂತ ಮುಖ್ಯವಾಗಿ ಕೆಮಿಸ್ಟ್, ಉದ್ಯಮಿ ಮಖಾನ್ಲಾಲ್ ಬಿಂದ್ರೂ ಅವರ ಹತ್ಯೆ ಮಾಡಿದ್ದ ಲಷ್ಕರ್ ಎ- ತೊಯ್ಬಾದ (ಎಲ್ಇಟಿ) ಮತ್ತೊಂದು ವಿಭಾಗವಾದ ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸಂಘಟನೆಯ ಮೂವರನ್ನು ಹೊಡೆದುರುಳಿಸಲಾಗಿದೆ.
ಶೋಪಿಯಾನ್ ಜಿಲ್ಲೆಯ ಇಮಾಮಸಾಬ್ ಪ್ರದೇಶದಲ್ಲಿ ಸೋಮವಾರ ಆರಂಭವಾಗಿದ್ದ ಗುಂಡಿನ ಚಕಮಕಿ ಮಂಗಳವಾರ ಮುಂಜಾನೆ ಅಂತ್ಯಗೊಂಡಿದೆ.
ನಿಖರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದ್ದು, ಪ್ರತಿದಾಳಿ ನಡೆಸಿದ ಸೇನೆ ಮೂವರನ್ನು ಕೊಂದಿವೆ. ಈ ಮೂವರೂ ಕೂಡಾ ಅಪರಾಧ ಕೃತ್ಯಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದರು. ಅವರನ್ನು ಕೊಂದಿರುವುದು ದೊಡ್ಡ ಸಾಧನೆ ಎಂದು ಸೇನೆ ಹೇಳಿದೆ.
ಇತ್ತೀಚೆಗೆ ಶ್ರೀನಗರದಲ್ಲಿ ಬಿಹಾರದ ಒಬ್ಬ ಅಮಾಯಕ ಬೀದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಎಂಬಾತನನ್ನು ಕೊಂದಿದ್ದ ಭಯೋತ್ಪಾದಕ ಗಂದೇರ್ಬಾಲ್ನ ನಿವಾಸಿ ಮುಕ್ತಾರ್ ಶಾನನ್ನು ಕೂಡಾ ಹೊಡೆದುರುಳಿಸಲಾಗಿದೆ. ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ತನಿಖಾಧಿಕಾರಿ ಮೇಲೆಯೇ ಮುಂಬೈ ಪೊಲೀಸರ ಬೇಹುಗಾರಿಕೆ?: ಶಾರುಖ್ ಪುತ್ರ ಭಾಗಿಯಾದ ಪ್ರಕರಣಕ್ಕೆ ತಿರುವು