ನವದೆಹಲಿ: ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆಗೇರುತ್ತಿದೆ. ರಾಜ್ಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನೇರ ಪೈಪೋಟಿ ನೀಡಲಿದೆ ಎಂಬ ಭವಿಷ್ಯಗಳು ಸುಳ್ಳಾಗಿವೆ. ಕಮಲ ಪಕ್ಷ ಭಾರಿ ಬಹುಮತದಿಂದ ಅಧಿಕಾರ ಉಳಿಸಿಕೊಳ್ಳುವಲ್ಲಿ 'ಲಾಡ್ಲಿ ಬೆಹ್ನಾ' ಯೋಜನೆಯ ಪಾತ್ರ ಪ್ರಮುಖವಾಗಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.
ಮಧ್ಯಪ್ರದೇಶದ 230 ಸದಸ್ಯಬಲದ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಂದಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಬಿಜೆಪಿ 163, ಕಾಂಗ್ರೆಸ್ 66 ಸ್ಥಾನ ದೊರೆತಿದೆ. ಇದು ಕೇಸರಿ ಪಾಳಯ ಬೃಹತ್ ಗೆಲುವಿನ ಮೂಲಕ ಮತ್ತೆ ಆಡಳಿತದ ಚುಕ್ಕಾಣಿಯುವ ಸ್ಪಷ್ಟ ಸೂಚನೆ ನೀಡಿದೆ. ಮತ್ತೆ ಮುಖ್ಯಮಂತ್ರಿ ಗಾದಿಯ ಮೇಲೆ ಶಿವರಾಜ್ ಸಿಂಗ್ ಚೌಹಾಣ್ ಕಣ್ಣಿಟ್ಟಿದ್ದಾರೆ.
ಬಿಜೆಪಿ ಕೈ ಹಿಡಿದ 'ಲಾಡ್ಲಿ ಬೆಹ್ನಾ':2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಹಿಡಿದು 15 ತಿಂಗಳು ಅಧಿಕಾರ ನಡೆಸಿತ್ತು. 2020ರಲ್ಲಿ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಶಾಸಕರ ವಲಸೆಯಿಂದಾಗಿ ಕೈ ಪಡೆಯ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಚುನಾವಣಾ ಹೊಸ್ತಿಲಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಮಹಿಳೆಯರಿಗೆ ಆರ್ಥಿಕ ನೆರವು ಕಲ್ಪಿಸುವ 'ಲಾಡ್ಲಿ ಬೆಹ್ನಾ' ಎಂಬ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯ ಮೂಲಕ ರಾಜ್ಯದ ಬಡ ಕುಟುಂಬಗಳ ಅರ್ಹ ಮಹಿಳೆಯರಿಗೆ ಮಾಸಿಕವಾಗಿ 1,250 ರೂಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಈ ಚುನಾವಣೆಯಲ್ಲಿ 'ಲಾಡ್ಲಿ ಬೆಹ್ನಾ'ನಂತಹ ಯೋಜನೆಗಳು ಬಿಜೆಪಿ ಕೈ ಹಿಡಿದಿವೆ ಎಂದೇ ಹೇಳಲಾಗುತ್ತಿದೆ.