ನವದೆಹಲಿ :ದೆಹಲಿಯ ದ್ವಾರಕಾ ಸೆಕ್ಟರ್-23 ಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿ ವಯಸ್ಸಾದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ 70 ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರು. ಆದರೂ ಅವರು ಸಾಯದೆ ಬದುಕುಳಿದರು. ಆದರೆ ವಿಧಿಯಾಟ ನೋಡಿ.. ಹೀಗೆ ಬದುಕಿದ ಆಕೆಯನ್ನು ಸ್ವಂತ ಮಗನೇ ಕತ್ತು ಹಿಸುಕಿ ಸಾಯಿಸಿದ್ದಾನೆ. ಇನ್ನೂ ವಿಚಿತ್ರ ಏನೆಂದರೆ ತಾಯಿಯ ಕೊಲೆ ಮಾಡಿದ ಬಳಿಕ ಆತ ತಾನೂ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾಯಲು ಪ್ರಯತ್ನಿಸಿ, ಬದುಕುಳಿದಿದ್ದಾನೆ. ಮೊದಲಿಗೆ ಮಾಳಿಗೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದನಾದರೂ ಧೈರ್ಯ ಸಾಲದೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ಮಹಿಳೆಯ ಮಗ ತನ್ನ ಸೋದರ ಸಂಬಂಧಿಗೆ ಮೊಬೈಲ್ನಲ್ಲಿ ಮೆಸೇಜ್ ಮಾಡಿ ಈ ಬಗ್ಗೆ ತಿಳಿಸಿದ್ದ. ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಸ್ಥಳಕ್ಕಾಗಮಿಸಿ ವೃದ್ಧೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ತನಿಖೆಯ ವೇಳೆ ಪೊಲೀಸರಿಗೆ ಕೋಣೆಯ ಗೋಡೆಯ ಮೇಲೆ ತಾಯಿ ಮತ್ತು ಮಗನ ಸಹಿ ಇರುವ ಸೂಸೈಡ್ ನೋಟ್ ಪತ್ತೆಯಾಗಿದೆ. ಮನೆಯ ಆರ್ಥಿಕ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ತಾಯಿ - ಮಗ ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಮಹಿಳೆಯನ್ನು ಬಸಾಬಿ ಬಿಸ್ವಾಸ್ (65) ಎಂದು ಗುರುತಿಸಲಾಗಿದೆ ಎಂದು ದ್ವಾರಕಾ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆ ದ್ವಾರಕಾ ಸೆಕ್ಟರ್-22 ರಲ್ಲಿರುವ ಹಿಮಾಲಯ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಮಗ ಅನಿರ್ಬನ್ (33) ಜೊತೆ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಆಕೆಯ ಪತಿ ಕಳೆದ ವರ್ಷ ನಿಧನರಾಗಿದ್ದರು. ಇದರ ನಂತರ ಅವರ ಮನೆಯ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಇದರಿಂದ ತಾಯಿ ಮತ್ತು ಮಗ ಖಿನ್ನತೆಗೆ ಒಳಗಾಗಿದ್ದರು. ಈ ಕಾರಣಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದಾರೆ. ಮೃತ ಮಹಿಳೆಯ ಸಹೋದರ ದೆಹಲಿ ಸರ್ಕಾರದಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ ಮತ್ತು ಕೊರೊನಾ ಅವಧಿಯಲ್ಲಿ ವಿಆರ್ಎಸ್ ತೆಗೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನಿರ್ಬನ್ ಇವರಿಗೆ ಮಾಹಿತಿ ನೀಡಿದ್ದ.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸಹೋದರಿ ಮನೆಗೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಫ್ಲಾಟ್‌ನ ಬಾಗಿಲು ತೆರೆದಿದ್ದು, ಮಹಿಳೆ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇದರೊಂದಿಗೆ ಮನೆಯ ಗೋಡೆಯ ಮೇಲೆ ಸೂಸೈಡ್ ನೋಟ್ ಕೂಡ ಪತ್ತೆಯಾಗಿದೆ. ಮಹಿಳೆಯ ಮಗ ಮನೆಯ ಛಾವಣಿಯ ಮೇಲೆ ಒಂದು ಮೂಲೆಯಲ್ಲಿ ಕುಳಿತಿರುವುದು ಕಂಡು ಬಂದಿದೆ. ಸೋಮವಾರ ರಾತ್ರಿ ತನ್ನ ತಾಯಿ ಸುಮಾರು 70 ನಿದ್ದೆ ಮಾತ್ರೆಗಳನ್ನು ಸೇವಿಸಿದ್ದರು, ಆದರೆ ಮಂಗಳವಾರ ಬೆಳಗಿನ ಜಾವದವರೆಗೂ ಅವರು ಪ್ರಜ್ಞೆ ಹೊಂದಿದ್ದರು ಎಂದು ಮಗ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ತಾಯಿಯ ಆಜ್ಞೆಯ ಮೇರೆಗೆ ಆತ ಆಕೆಯ ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದನಾದರೂ ಧೈರ್ಯ ಸಾಲದೆ ಬದುಕಿದ್ದಾನೆ. ವೃದ್ಧೆಯ ಕತ್ತಿನ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ದ್ವಾರಕಾ ಸೆಕ್ಟರ್ 23 ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮಗನನ್ನು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಕೊಲೆ ಬೆದರಿಕೆ ಆರೋಪ: ಪೊಲೀಸರಿಗೆ ದೂರು ನೀಡಿದ ನಟಿ ಸಂಜನಾ ಗಲ್ರಾನಿ