ನವದೆಹಲಿ:ರಾಜಸ್ಥಾನದ ಬಿಕಾನೇರ್‌ನಲ್ಲಿ ಮಂಗಳವಾರ ರಾತ್ರಿ 11:36 ಕ್ಕೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಸುತ್ತಲಿನ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ. ಸದ್ಯಕ್ಕೆ ಯಾವುದೇ ಅನಾಹುತದ ವರದಿಗಳು ಬಂದಿಲ್ಲ. ಭೂಮಿ ನಡುಗಿದ ಕಾರಣ ಜನರು ಆತಂಕಕ್ಕೀಡಾಗಿದ್ದಾರೆ.
ಭೂಕಂಪನದ ರಾಷ್ಟ್ರೀಯ ಕೇಂದ್ರದ (ಎನ್ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಬಿಕಾನೇರ್‌ನಿಂದ 685 ಕಿಮೀ ದೂರದ ಪಶ್ಚಿಮ ಭಾಗದಲ್ಲಿತ್ತು. ಇದು 10 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿದೆ. ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. ಬಿಕಾನೇರ್ ಪ್ರದೇಶ ಆಗಾಗ್ಗೆ ಭೂಕಂಪನಕ್ಕೆ ತುತ್ತಾಗಲೇ ಇರುವ ಪ್ರದೇಶವಾಗಿದೆ. ಇಲ್ಲಿನ ಭೂಒಡಲಿನ ಶಿಲಾಪದರಗಳು ಸಡಿಲವಾಗಿದ್ದು, ಹಲವು ಕಾರಣಕ್ಕಾಗಿ ಘರ್ಷಣೆಗೆ ಒಳಗಾಗಿ ಭೂಮಿ ನಡುಕ ಉಂಟಾಗುತ್ತದೆ.
ಬಿಕಾನೇರ್ಗೂ ಮುನ್ನ, ಅಂದರೆ ಮಂಗಳವಾರ ಬೆಳಗ್ಗೆ 7.08 ನಿಮಿಷಕ್ಕೆ ಹರ್ಯಾಣದ ಝಜ್ಜರ್ ಪ್ರದೇಶದಲ್ಲಿ ಸಣ್ಣ ಭೂಕಂಪನ ಉಂಟಾಗಿತ್ತು. ರಿಕ್ಟರ್ ಮಾಪಕದಲ್ಲಿ 2.5 ತೀವ್ರತೆ ದಾಖಲಾಗಿತ್ತು. ಝಜ್ಜರ್ನ 76 ಕಿಮೀ ದೂರದಲ್ಲಿ ಇದರ ಕೇಂದ್ರಬಿಂದು ಗೋಚರವಾಗಿತ್ತು. 12 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿದ್ದವು. ಯಾವುದೇ ಹಾನಿ ಸಂಭವಿಸಿಲ್ಲ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಟರ್ಕಿಯಲ್ಲಿ ನರಕ ಸೃಷ್ಟಿಸಿದ್ದ ಭೂಕಂಪ:ಫೆಬ್ರವರಿಯ 6 ರಂದು ಸಂಭವಿಸಿದ ಸರಣಿ ಭೂಕಂಪನಗಳಿಂದ ಟರ್ಕಿ ಮತ್ತು ಸಿರಿಯಾ ಅಕ್ಷರಶಃ ನರಕಸದೃಶ್ಯವಾಗಿದ್ದವು. ಭೀಕರ ಪ್ರಕೃತಿ ವಿಕೋಪದಿಂದ 34 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಟರ್ಕಿ ದೇಶವೊಂದರಲ್ಲೇ 30 ಸಾವಿರದಷ್ಟು ಮಂದಿ ಅಸುನೀಗಿದ್ದರು. ಸಿರಿಯಾದಲ್ಲಿ ಸಾವಿನ ಸಂಖ್ಯೆ 4 ಸಾವಿರ ಆಗಿತ್ತು.