ಕರ್ನಾಟಕ

karnataka

ETV Bharat / bharat

ಗಣರಾಜ್ಯೋತ್ಸವ ದಿನದಂದು ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಕಾಂಗ್ರೆಸ್​, ಡಿವೈಎಫ್‌ಐ ಘೋಷಣೆ - ಯುವ ಕಾಂಗ್ರೆಸ್

ಕೇರಳದಲ್ಲಿ ನಿಷೇಧಿತ ಬಿಬಿಸಿ 'ಇಂಡಿಯಾ: ದಿ ಮೋದಿ ಕ್ವೆಶ್ಚನ್​' ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಕಾಂಗ್ರೆಸ್​ ಅಲ್ಪಸಂಖ್ಯಾತರ ಘಟಕ ಮತ್ತು ಯುವ ಘಟಕ ಹಾಗೂ ಡಿವೈಎಫ್‌ಐ ಸಂಘಟನೆ ಹೇಳಿದೆ. ಮತ್ತೊಂದೆಡೆ ದೇಶವನ್ನು ಅವಮಾನಿಸುವ ಸಾಕ್ಷ್ಯಚಿತ್ರವನ್ನು ನಿಷೇಧಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

dyfi-and-youth-congress-says-bbc-documentary-will-be-shown-in-kerala
ಗಣರಾಜ್ಯೋತ್ಸವ ದಿನದಂದು ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಕಾಂಗ್ರೆಸ್​, ಡಿವೈಎಫ್‌ಐ ಘೋಷಣೆ

By

Published : Jan 24, 2023, 6:30 PM IST

ತಿರುವನಂತಪುರಂ (ಕೇರಳ): ಗಣರಾಜ್ಯೋತ್ಸವ ದಿನದಂದು 2002ರ ಗುಜರಾತ್ ಗಲಭೆ ಮತ್ತು ಪ್ರಧಾನಿ ಮೋದಿ ಕುರಿತ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಅಲ್ಪಸಂಖ್ಯಾತರ ಘಟಕ ಮುಂದಾಗಿದೆ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಸೂಚನೆಗಳನ್ನೂ ಧಿಕ್ಕರಿಸಿ ಈ ಸಾಕ್ಷ್ಯಚಿತ್ರ ಪ್ರದರ್ಶಿಸಲು ಕಾಂಗ್ರೆಸ್​ ತೀರ್ಮಾನಿಸಿದ್ದು, ಬಿಬಿಸಿ ಸಾಕ್ಷ್ಯಚಿತ್ರವು ಪಕ್ಷಪಾತಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಜನರಿಗೆ ಅವಕಾಶ ನೀಡಬೇಕೆಂದು ಪಕ್ಷದ ಮುಖಂಡರು ಒತ್ತಾಯಿಸಿದರು.

ಇದನ್ನೂ ಓದಿ:ಗುಜರಾತ್​ ಗಲಭೆಯ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ: 'ಅಪಪ್ರಚಾರದ ಉದ್ದೇಶ'- ಭಾರತ ಖಂಡನೆ

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪಾತ್ರದ ಬಗ್ಗೆ ಬಿಬಿಸಿ ಸಿದ್ಧಪಡಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ಚನ್​' ಎಂಬ ಸಾಕ್ಷ್ಯಚಿತ್ರದ ಪ್ರಸಾರವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಯಾವುದೇ ಕ್ಲಿಪ್‌ಗಳನ್ನು ಹಂಚಿಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಆದೇಶದ ಹೊರತಾಗಿಯೂ ಕೇರಳ ಕಾಂಗ್ರೆಸ್​ ಅಲ್ಪಸಂಖ್ಯಾತರ ಘಟಕ ಮತ್ತು ಯುವ ಕಾಂಗ್ರೆಸ್​ ಘಟಕವು ಈ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಗಣರಾಜ್ಯೋತ್ಸವದಂದು ಮಾಡುವುದಾಗಿ ಪ್ರಕಟಿಸಿದೆ.

ಸಾಕ್ಷ್ಯಚಿತ್ರವನ್ನು ಮೋದಿ ಸರ್ಕಾರ ಹೇಗೆ ನಿಷೇಧಿಸುತ್ತದೆ. ಕೇಂದ್ರವು ನಿಷೇಧ ಹೇರುವ ಬದಲು ಜನರು ಸಾಕ್ಷ್ಯಚಿತ್ರವನ್ನು ನೋಡಿ ನಿರ್ಧರಿಸಬೇಕು. ಈ ದೇಶದ ಜನರು ಯಾವುದು ತಪ್ಪು ಮತ್ತು ಯಾವುದು ಅಲ್ಲ ಎಂಬುದನ್ನು ನಿರ್ಧರಿಸಲಿ. ಮೋದಿ ಗುಜರಾತ್‌ನ ಹಿಂದಿನ ಮುಖ್ಯಮಂತ್ರಿ ಆಗಿದ್ದರು. ಆಗ ಅಲ್ಲಿ ನಡೆದ ಗಲಭೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಈ ಸಾಕ್ಷ್ಯಚಿತ್ರವನ್ನು ನಿಷೇಧಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಗಣರಾಜ್ಯೋತ್ಸವದಂದು ಈ ಸಾಕ್ಷ್ಯಚಿತ್ರವನ್ನು ಕೇರಳದಾದ್ಯಂತ ಪ್ರದರ್ಶಿಸಲಾಗುವುದು ಎಂದು ಕಾಂಗ್ರೆಸ್​ ನಾಯಕರಾದ ರಶೀದ್ ಅಲ್ವಿ ಮತ್ತು ಶಿಹಾಬುದ್ಧೀನ್ ಹೇಳಿದ್ದಾರೆ.

ಡಿವೈಎಫ್‌ಐನಿಂದ ಘೋಷಣೆ: ಕೇರಳದ ಆಡಳಿತಾರೂಢ ಸಿಪಿಎಂನ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಸಹ 'ಇಂಡಿಯಾ: ದಿ ಮೋದಿ ಕ್ವೆಶ್ಚನ್​' ಸಾಕ್ಷ್ಯಚಿತ್ರದ ಪ್ರದರ್ಶನ ಮಾಡಲಾಗುವುದು ಎಂದು ಘೋಷಿಸಿದೆ. ಈ ಸಾಕ್ಷ್ಯಚಿತ್ರದ ಯೂಟ್ಯೂಬ್ ವಿಡಿಯೋಗಳು ಮತ್ತು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಲಿಂಕ್‌ಗಳನ್ನು ಹಂಚಿಕೊಳ್ಳವುದು ಮತ್ತು ಟ್ವಿಟರ್ ಪೋಸ್ಟ್​ಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ಡಿವೈಎಫ್‌ಐ ತನ್ನ ಫೇಸ್‌ಬುಕ್ ಪುಟದಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನದ ಬಗ್ಗೆ ತಿಳಿಸಿದೆ.

ಆಕ್ರೋಶ ಹೊರಹಾಕಿದ ಬಿಜೆಪಿ: ಮತ್ತೊಂದೆಡೆ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಬಗ್ಗೆ ಕಾಂಗ್ರೆಸ್​ ಮತ್ತು ಡಿವೈಎಫ್‌ಐ ಘೋಷಿಸುತ್ತಿದ್ದಂತೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಈ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ದೂರು ಸಲ್ಲಿಸಿದ್ದು, ದೇಶವನ್ನು ಅವಮಾನಿಸುವ ಸಾಕ್ಷ್ಯಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ, ಕೇರಳದಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಎಚ್ಚರಿಸಿದೆ.

ಹೈದರಾಬಾದ್​ನಲ್ಲಿ ಪ್ರದರ್ಶನ:ಇನ್ನೊಂದೆಡೆ ತೆಲಂಗಾಣದ ಹೈದರಾಬಾದ್​ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಬಿಬಿಸಿಯ ಈ ಇಂಡಿಯಾ: ದಿ ಮೋದಿ ಕ್ವೆಶ್ಚನ್​ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ. ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಮತ್ತು ಫ್ರೆಟರ್ನಿಟಿ ಗ್ರೂಪ್ ಈ ಪ್ರದರ್ಶನವನ್ನು ಆಯೋಜಿಸಿತ್ತು. ಇದರಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಎಬಿವಿಪಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ದೂರು ನೀಡಿ, ಸಾಕ್ಷ್ಯಚಿತ್ರ ಪ್ರದರ್ಶಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಇದನ್ನೂ ಓದಿ:ಹೈದರಾಬಾದ್ ಕೇಂದ್ರೀಯ​ ವಿವಿಯಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ

ABOUT THE AUTHOR

...view details