ವಿಜಯವಾಡ(ಆಂಧ್ರಪ್ರದೇಶ):ಆಂಧ್ರಪ್ರದೇಶ ಮೂಲದ ಯುವಕನೊಬ್ಬ ಪೊಲೀಸರ ಕೈಗೆ ಸಿಗದ ರೀತಿಯಲ್ಲಿ ವಿದೇಶಕ್ಕೆ ಡ್ರಗ್ಸ್ ಕಳುಹಿಸಲು ಹೋಗಿ, ಇದೀಗ ಖಾಕಿ ಪಡೆ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಜಯವಾಡದಿಂದ ಆಸ್ಟ್ರೇಲಿಯಾಕ್ಕೆ ಕೊರಿಯರ್ ಕಂಪನಿ ಮೂಲಕ ಡ್ರಗ್ಸ್ ಸಾಗಣೆ ಮಾಡ್ತಿದ್ದ ಈ ವ್ಯಕ್ತಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ವಿಜಯವಾಡದ ಭಾರತಿ ನಗರದ ಕೊರಿಯರ್ ಕಂಪನಿ ಮೂಲಕ ಅಕ್ರಮ ಮಾದಕ ದ್ರವ್ಯ ಆಸ್ಟ್ರೇಲಿಯಾಗೆ ರವಾನೆ ಮಾಡ್ತಿದ್ದನು. ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಿಜಯವಾಡದಿಂದ ಬಂದಿರುವ ಪಾರ್ಸೆಲ್ ತಪಾಸಣೆಗೊಳಪಡಿಸಿದಾಗ ಈ ಡ್ರಗ್ಸ್ ಪತ್ತೆಯಾಗಿದ್ದು, ಆರೋಪಿ ಗೋಪಿಸಾಯಿ ಎಂಬಾತನ ಬಂಧಿಸಿದ್ದಾರೆ. ಗೋಪಿಸಾಯಿ ಮೂಲತಃ ಪಲ್ನಾಡು ಜಿಲ್ಲೆಯವನಾಗಿದ್ದು, ಇಂಜಿನಿಯರಿಂಗ್ ಮುಗಿದ ಬಳಿಕ ಹೈದರಾಬಾದ್ನಲ್ಲಿ ಕೆಲಸ ಮಾಡ್ತಿದ್ದಾನೆ.
ಈ ವರ್ಷದ ಜನವರಿ ತಿಂಗಳಲ್ಲಿ ವಿಜಯವಾಡದ ಭಾರತೀನಗರದಲ್ಲಿರುವ ಡಿಎಸ್ಟಿ ಕೊರಿಯರ್ ಮೂಲಕ ಆಸ್ಟ್ರೇಲಿಯಾಕ್ಕೆ ಪಾರ್ಸೆಲ್ ಮಾಡಿದ್ದಾನೆ. ಈ ವೇಳೆ, ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ಪಾರ್ಸೆಲ್ ಕಳುಹಿಸಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಗೋಪಿಗೆ ತಿಳಿಸಿದ್ದನು. ಗೋಪಿ ನೀಡಿರುವ ಆಧಾರ್ ಕಾರ್ಡ್ ಜೆರಾಕ್ಸ್ ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ನೀಡುವಂತೆ ತಿಳಿಸಿದ್ದಾರೆ.