ಡೆಹ್ರಾಡೂನ್ (ಉತ್ತರಾಖಂಡ):ಇಲ್ಲಿನ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಒಂಬತ್ತನೇ ದಿನವೂ ಮುಂದುವರಿದಿದೆ. ಸುರಂಗದ ಮೇಲಿನಿಂದ ರಂಧ್ರ ಕೊರೆದು ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಚಿಂತನೆ ನಡೆದಿರುವ ನಡುವೆ, ರೋಬೋಟಿಕ್ ತಂತ್ರಜ್ಞಾನದ ಮೊರೆ ಹೋಗಲಾಗಿದೆ. 2 ರೋಬೋಗಳನ್ನು ಸುರಂಗದೊಳಗೆ ಕಳುಹಿಸಲಾಗಿದೆ. ಅವುಗಳ ನೆರವಿನಿಂದ ಸಿಲುಕಿದವರನ್ನು ಹೊರತರುವ ಪ್ರಯತ್ನ ಮಾಡಲಾಗುವುದು ಎಂದು ರೊಬೊಟಿಕ್ಸ್ ತಂಡ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎನ್ಎಚ್ಐಡಿಸಿಎಲ್ ನಿರ್ದೇಶಕ ಅಂಶು ಮನೀಶ್ ಅವರು, ಡಿಆರ್ಡಿಒದ ರೊಬೊಟಿಕ್ಸ್ ತಂಡವು ಕೆಲಸ ಮಾಡಲು ಪ್ರಾರಂಭಿಸಿದೆ. ತಂಡವು 20 ಮತ್ತು 50 ಕೆಜಿ ತೂಕದ ಎರಡು ರೋಬೋಟ್‌ಗಳನ್ನು ಸುರಂಗದೊಳಗೆ ಕಳುಹಿಸಿದೆ. ರೋಬೋಟ್‌ಗಳು ನೆಲ ಮತ್ತು ಮರಳಿನಲ್ಲಿ ನಡೆಯುತ್ತವೆ. ಇವುಗಳು ಕುಸಿದ ಮಣ್ಣಿನಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ರೋಬೋಟ್ಗಳ ಕೆಲಸವೇನು?:ಸುರಂಗದೊಳಗೆ ಭೂಕುಸಿತ ಉಂಟಾಗಿರುವ ಜಾಗಕ್ಕೆ ಅವುಗಳನ್ನು ಕಳುಹಿಸಲಾಗುತ್ತದೆ. ಅಲ್ಲಿ ಶೇಖರಣೆಯಾಗಿರುವ ಮಣ್ಣಿನ ಅವಶೇಷಗಳ ಮೇಲ್ಭಾಗದಲ್ಲಿ ಸ್ವಲ್ಪ ಜಾಗವಿದ್ದು, ಅದರೊಳಗಿನಿಂದ ರೋಬೋಟ್ ಅನ್ನು ಕಳುಹಿಸಲಾಗುತ್ತದೆ. ಅಲ್ಲಿರುವ ಮಣ್ಣನ್ನು ರೋಬೋಟ್ ಮೂಲಕ ತೆಗೆದು ಹಾಕುವ ಕೆಲಸ ಮಾಡಲಾಗುತ್ತದೆ. ಇದರ ಜೊತೆಗೆ ದೊಡ್ಡ ಪೈಪ್ ಅನ್ನು ಸುರಂಗದೊಳಗೆ ಅಳವಡಿಸಲಾಗಿದೆ. ಇದರಿಂದ ಆಹಾರ, ನೀರು, ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.