ಹೈದರಾಬಾದ್ (ತೆಲಂಗಾಣ): ಬುಧವಾರ ಹೈದರಾಬಾದ್ನ ಅಂಬರ್ಪೇಟ್ ಎಂಬಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿಮಾಡಿ ಕೊಂದು ಹಾಕಿದ ಘಟನೆ ವರದಿ ಆದ ಬೆನ್ನಲ್ಲೇ ಒಂದೇ ದಿನ 16 ಜನರ ಮೇಲೆ ದಾಳಿ ಆಗಿರುವುದು ತಿಳಿದು ಬಂದಿದೆ. ಈ ನಡುವೆ ಹೈದರಾಬಾದ್ನಲ್ಲಿ 5.5 ಲಕ್ಷ ಬೀದಿ ನಾಯಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಬರ್ಪೇಟ್ನ ಘಟನೆ ಮಾಸುವ ಮೊದಲೇ ಚೈತನ್ಯಪುರಿಯಲ್ಲಿ ನಾಲ್ಕು ವರ್ಷದ ಮತ್ತೊಬ್ಬ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ. ಪೋಷಕರು ಎಚ್ಚರಿಕೆಯಿಂದ ಮಗು ಬದುಕುಳಿದಿದೆ. ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲೆಯಲ್ಲಿ 14 ಮಂದಿ, ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಒಬ್ಬರು, ಖಮ್ಮಂ ಜಿಲ್ಲೆಯಲ್ಲಿ ಬಾಲಕನೊಬ್ಬನ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ರಂಗಾರೆಡ್ಡಿ ಜಿಲ್ಲೆಯ ಯಾಚರಂ ಗ್ರಾಮದಲ್ಲಿ ಗುರುವಾರ ಹುಚ್ಚು ನಾಯಿಯೊಂದು ಅಟ್ಟಹಾಸ ಮೆರೆದಿದ್ದು. ಇದು ಗ್ರಾಮದ 10 ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಯಾಚಾರಂನ ಗೃಹಿಣಿ ರೇಣುಕಾ(32), ಗಡಲ ನಂದೀಶ್ವರ(28), ರಾಮುಲಮ್ಮ(60), ಕೊಮುರಯ್ಯ(65), ಮಲ್ಕೀಜಗೂಡಿನ ವೆಂಕಟಮ್ಮ(60), ಬೋಡ ವೆಂಕಟಮ್ಮ(55), ನಂದಿವನಪರ್ತಿಯ ಸುಧಾಕರ್(50), ಮೊಂಡಿಗೂರೆಳ್ಳಿಯ ಶ್ಯಾಮಸುಂದರ್(26), ಬೋಡುಪ್ಪಲಿನ ಮಹೇಶ್ (36) ಮತ್ತು ಇಬ್ರಾಹಿಂಪಟ್ಟಣದ ಸಾಯಮ್ಮ (55) ಗಾಯಗೊಂಡವರು. ಬೀದಿಯಲ್ಲಿ ಸಿಕ್ಕವರನ್ನೆಲ್ಲಾ ಕಚ್ಚುತ್ತಾ ಸಾಗಿದ ನಾಯಿ ಸುಮಾರು ಒಂದು ಗಂಟೆಯಲ್ಲಿ ಹತ್ತು ಜನರನ್ನು ಕಚ್ಚಿ ಗಾಯಗೊಳಿಸಿದೆ.
10 ಜನರಿಗೆ ಕಚ್ಚಿದ ಶ್ವಾನವನ್ನು ಹುಚ್ಚು ನಾಯಿ ಎಂದು ಗುರುತಿಸಿದ ಕೆಲ ಯುವಕರು ಹೊಡೆದು ಸಾಯಿಸಿದ್ದಾರೆ. ನಾಯಿ ಕಚ್ಚಿದ ನಾಲ್ವರಿಗೆ ಜ್ವರದ ಲಕ್ಷಣ ಕಂಡು ಬಂದಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಶ್ವಾನ ಕಚ್ಚಿದ ಕೂಡಲೇ 108 ಆಂಬ್ಯುಲೆನ್ಸ್ಗೆ ಕರೆ ಮಾಡಿ ತಿಳಿಸಿದರೂ ಸುಮಾರು ಒಂದೂವರೆ ಗಂಟೆ ತಡವಾಗಿ ಬಂದಿದೆ ಎಂದು ಸಂತ್ರಸ್ತರು ದೂರಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಕಂದುಕೂರು ಮಂಡಲ ವ್ಯಾಪ್ತಿಯ ಗ್ರಾಮದಲ್ಲಿ ಗುರುವಾರ ನಾಲ್ಕು ಜನರ ಮೇಲೆ ನಾಯಿಗಳು ದಾಳಿ ನಡೆಸಿವೆ.