ಬಾಡ(ಮಹಾರಾಷ್ಟ್ರ):ಭಾರತದೆಲ್ಲೆಡೆ ದೀಪಾವಳಿಯನ್ನು ವೈವಿಧ್ಯಮಯ ಸಂಪ್ರದಾಯಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪಟಾಕಿ ಸಿಡಿಸುವುದು, ದೇವಸ್ಥಾನಗಳಲ್ಲಿ ವಿಶೇಶ ಪೂಜೆ ಕೈಗೊಳ್ಳುವ ಮೂಲಕ ಆಚರಣೆ ನಡೆಯುತ್ತದೆ. ಸಾಮಾನ್ಯವಾಗಿ ದೇವಸ್ಥಾನದಲ್ಲಿ ಪೂಜೆಯ ನಂತರ ಭಕ್ತರಿಗೆ ಆಶೀರ್ವಾದವಾಗಿ ತೀರ್ಥ, ಪ್ರಸಾದ ಭಕ್ಷ್ಯ ನೀಡಲಾಗುತ್ತದೆ. ವಿಶೇಷವೆಂದರೆ, ಇಲ್ಲೊಂದು ದೇವಾಲಯದಲ್ಲಿ ದೀಪಾವಳಿ ರಾತ್ರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಣದ ರೂಪದಲ್ಲಿ ಪ್ರಸಾದ ವಿತರಿಸುತ್ತಾರೆ.
ಅಮರಾವತಿ ನಗರದ ಹಿಂದೂ ರುದ್ರಭೂಮಿಗೆ ಹೊಂದಿಕೊಂಡಿರುವ ಕಾಳಿಮಾತಾ ದೇವಸ್ಥಾನದಲ್ಲಿ ದೀಪಾವಳಿಯ ದಿನ ರಾತ್ರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ಹಣವನ್ನು ನೀಡುವ ಪದ್ಧತಿ ಕಳೆದ 38 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ಹಣದ ಪ್ರಸಾದ ಪಡೆಯಲು ಕಾಳಿ ಮಾತೆಯ ಭಕ್ತರು ಮುಗಿಬೀಳುತ್ತಾರೆ.
ಅಭಿವೃದ್ಧಿಯ ಪ್ರಸಾದವೆಂಬ ನಂಬಿಕೆ: ಈ ಪ್ರಸಾದವನ್ನು ಅಭಿವೃದ್ಧಿಯ ಸಂಕೇತ ಎಂದು ಇಲ್ಲಿನ ಭಕ್ತರು ನಂಬಿಕೊಂಡು ಬಂದಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಪ್ರಧಾನ ಅರ್ಚಕ ಶಕ್ತಿ ಮಹಾರಾಜರು ಈ ಪ್ರಸಾದವನ್ನು ಹಂಚುತ್ತಾರೆ. ಹತ್ತು ರೂಪಾಯಿಯ ಹೊಸ ನೋಟುಗಳನ್ನು ದೊಡ್ಡ ಮಡಕೆಯಲ್ಲಿರಿಸಿ ವಿತರಿಸಲಾಗುತ್ತದೆ. ಅರ್ಚಕರು ತಮ್ಮ ಕೈಗೆ ಸಿಕ್ಕಿದಷ್ಟು ಪ್ರಸಾದವನ್ನು ಭಕ್ತರು ಒಡ್ಡುವ ವಸ್ತ್ರಕ್ಕೆ ಹಾಕುತ್ತಾರೆ. ಹಾಗೆ ಹಾಕಿದ ಪ್ರಸಾದದಲ್ಲಿ ಭಕ್ತರ ಕೈಗೆ ಹತ್ತು ರೂಪಾಯಿಯ ಒಂದು, ಎರಡು ಅಥವಾ ಹೆಚ್ಚಿನ ನೋಟುಗಳೂ ಬರಬಹುದು. ಈ ಹಣದ ರೂಪದ ಪ್ರಸಾದ ತಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂಬುದು ಭಕ್ತರ ನಂಬಿಕೆ.