ಕಟಿಹಾರ್/ಬಿಹಾರ:ಸುಮಾರು 200 ವರ್ಷಗಳ ಕಾಲ ಭಾರತೀಯರನ್ನಾಳಿದ ಪರಕೀಯರ ಪ್ರಾಬಲ್ಯ ಕೊನೆಗಾಣಿಸಿ ಪಡೆದ ಸ್ವಾತಂತ್ರ್ಯ ಅಷ್ಟು ಸುಲಭಕ್ಕೆ ದಕ್ಕಿದ್ದಲ್ಲ. ಈ ಹೋರಾಟದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ, ಬದಲಿಗೆ ಕಲ್ಲು-ಮುಳ್ಳಿನ ಹಾದಿಯಂತಿತ್ತು. ಇಂಥ ಕಠಿಣ ದಾರಿಯಲ್ಲಿ ನಡೆದು ಬ್ರಿಟಿಷರ ಪಾರಮ್ಯದಿಂದ ನಮ್ಮ ಜನ್ಮಭೂಮಿಯನ್ನು ರಕ್ಷಿಸಿದ ವೀರರ ಹೆಸರು ಇತಿಹಾಸ ಪುಟದಲ್ಲಿ ಅಷ್ಟಾಗಿ ರಾರಾಜಿಸದಿದ್ದರೂ ಎಂದಿಗೂ ಅವರು ಹೀರೋಗಳೇ. ಇಂಥ ನಾಯಕರಲ್ಲಿ ಕೆಲವರು ಮುನ್ನಲೆಗೆ ಬಂದರೆ ಮತ್ತೆ ಕೆಲವರು ಎಲೆಮರೆಕಾಯಿಯಾಗೇ ಉಳಿದರು. ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರಷ್ಟೇ ವೀರಾವೇಶದಿಂದ ತಾಯ್ನಾಡಿನ ಉಳಿವಿಗಾಗಿ ಹೋರಾಡಿದರೂ ಅಂತವರನ್ನು ಈ ಸಮಾಜ ಗುರುತಿಸಲಿಲ್ಲ. ಇಂಥ ಪ್ರಸಿದ್ಧಿ ಪಡೆಯದ ಹೋರಾಟಗಾರರ ಪೈಕಿ ಪುರ್ನಿಯಾ ಜಿಲ್ಲೆಯ ಕ್ರಾಂತಿಕಾರಿ ಯುವಕ ಧ್ರುವ್ ಕುಂಡು ಸಹ ಒಬ್ಬರು.
ತಾಯ್ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಅತ್ಯಂತ ಕಿರಿಯ ಸ್ವಾತಂತ್ರ್ಯ ಹೋರಾಟಗಾರ ಧ್ರುವ್ ಕುಂಡು "ಧ್ರುವ್ ಕುಂಡು ಓರ್ವ ಕ್ರಾಂತಿಕಾರಿ, ಅವರು ರಾಷ್ಟ್ರದ ಬಗ್ಗೆ ಅದಮ್ಯವಾದ ಪ್ರೀತಿ ಇಟ್ಟುಕೊಂಡಿದ್ದರು. ಉಸಿರು ನೀಡಿದ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಾಯ್ನಾಡನ್ನು ಪ್ರೀತಿಸಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು 13ನೇ ವಯಸ್ಸಿನಲ್ಲೇ ಅವರು ಸಾಬೀತುಪಡಿಸಿದ್ದರು. ಧ್ರುವ್ ತಮ್ಮ ಶೌರ್ಯ ಮತ್ತು ನೈಪುಣ್ಯತೆಯಿಂದ, ಬಲಿಷ್ಠ ಬ್ರಿಟಿಷರೊಂದಿಗೆ ನಿರ್ಭಯವಾಗಿ ಹೋರಾಡಿದರು, "ಎಂದು ಧ್ರುವ್ ಕುಂಡು ಸ್ಮಾರಕ ನಿರ್ಮಾಣ ಚಳವಳಿಯ ಮುಖ್ಯಸ್ಥ ಗೌತಮ್ ವರ್ಮಾ ಹೇಳಿದರು.
ಧ್ರುವ್ ಕುಂಡು ಭಾರತದ ಸ್ವಾತಂತ್ರ್ಯ ಹೋರಾಟದ ಅಘೋಷಿತ ನಾಯಕ. 1942ರಲ್ಲಿ ಮಹಾತ್ಮ ಗಾಂಧಿಯವರ 'ಭಾರತ ಬಿಟ್ಟು ತೊಲಗಿ(ಕ್ವಿಟ್ ಇಂಡಿಯಾ)' ಚಳವಳಿಗೆ ಸೇರಿದರು. ಈ ಚಳವಳಿಯ ಭಾಗವಾಗಿ ಆಗಸ್ಟ್ 11, 1942 ರಂದು, ಕ್ರಾಂತಿಕಾರಿಗಳು ರಿಜಿಸ್ಟ್ರಾರ್ ಕಚೇರಿಗೆ ಬೆಂಕಿ ಹಚ್ಚಿದರು ಮತ್ತು ಎಲ್ಲಾ ದಾಖಲೆಗಳನ್ನು ಸುಟ್ಟುಹಾಕಿದರು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು ಆಗಸ್ಟ್ 13, 1942 ರಂದು ಕಟಿಹಾರ್ನ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ನೆಲಸಮಗೊಳಿಸಿದರು. ಮುನ್ಸಿಫ್ ನ್ಯಾಯಾಲಯ ಸೇರಿದಂತೆ ಬ್ರಿಟಿಷ್ ಸರ್ಕಾರದ ಧ್ವಜಗಳನ್ನು ಕಿತ್ತುಹಾಕಿದರು ಮತ್ತು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಸಮಯದಲ್ಲಿ ಕೇವಲ "13 ವರ್ಷದ ಹುಡುಗ ಕೂಡ ಹೋರಾಟಗಾರರ ತಂಡವನ್ನು ಸೇರಲು ನಿರ್ಧರಿಸಿದನು. ಕಟಿಹಾರ್ನ ಎಸ್‌ಡಿಒ ಮುಖರ್ಜಿ ಅವರು ಸ್ಥಳಕ್ಕೆ ಹೋಗದಂತೆ ಎಚ್ಚರಿಕೆ ನೀಡಿದರೂ, ಧ್ರುವ್ ಆಂದೋಲನಕ್ಕೆ ಧುಮುಕಿ ಬ್ರಿಟಿಷರ ವಿರುದ್ಧ ತೊಡೆ ತಟ್ಟಿದ" ಎಂದು ಇತಿಹಾಸಕಾರ ಭೋಲಾ ನಾಥ್ ಅಲೋಕ್ ವಿವರಿಸಿದರು.
ಈ ಬಾಲಕನ ಧೈರ್ಯವು ಬ್ರಿಟಿಷ್ ಪಡೆಗಳನ್ನು ಕೆರಳಿಸಿದ ಪರಿಣಾಮ ಅವರು ಧ್ರುವ್ ಮೇಲೆ ಗುಂಡು ಹಾರಿಸಿದರು. ಒಂದು ಗುಂಡು ಧ್ರುವನ ತೊಡೆ ಸೀಳಿ, ಆತನನ್ನು ತೀವ್ರವಾಗಿ ಗಾಯಗೊಳಿಸಿತು. ಚಿಕಿತ್ಸೆಗಾಗಿ ಪೂರ್ನಿಯಾ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಗಸ್ಟ್ 15, 1942 ರ ಬೆಳಗ್ಗೆ ಧ್ರುವ್ ಹುತಾತ್ಮರಾದರು. ಧ್ರುವ್ ಕುಂಡು ತನ್ನ ತಾಯ್ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಅತ್ಯಂತ ಕಿರಿಯ ಸ್ವಾತಂತ್ರ್ಯ ಹೋರಾಟಗಾರ ಎನಿಸಿಕೊಂಡರು.