ನವದೆಹಲಿ: ಕಳೆದ 18 ದಿನಗಳಲ್ಲಿ ಹಲವು ಬಾರಿ ತಾಂತ್ರಿಕ ದೋಷಗಳಿಂದಾಗಿ ಸ್ಪೈಸ್‌ಜೆಟ್ ಏರ್‌ಲೈನ್ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿವೆ. ಹೀಗಾಗಿ ಮುಂದಿನ 8 ವಾರಗಳವರೆಗೆ ಶೇ.50 ರಷ್ಟು ವಿಮಾನಗಳನ್ನು ಮಾತ್ರ ಕಾರ್ಯಾಚರಣೆಗೆ ಇಳಿಸುವಂತೆ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಆದೇಶಿಸಿದೆ.
ಆಫ್ ಸೀಸನ್ ಅವಧಿಯಾಗಿರುವುದರಿಂದ ಇತರ ಏರ್ಲೈನ್ಗಳಂತೆ ಸ್ಪೈಸ್‌ಜೆಟ್ ಈಗಾಗಲೇ ವಿಮಾನ ಹಾರಾಟದ ವೇಳಾಪಟ್ಟಿಯನ್ನು ಮರುಹೊಂದಿಸಿದೆ. ಹಾಗಾಗಿ ಈ ಆದೇಶ ತನ್ನ ವಿಮಾನಯಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗೂ ಯಾವುದೇ ವಿಮಾನಗಳನ್ನು ರದ್ದುಗೊಳಿಸುವುದಿಲ್ಲ. ಎಂಟು ವಾರಗಳವರೆಗೆ ಆದೇಶದಂತೆ ವಿಮಾನಗಳು ಕಾರ್ಯನಿರ್ವಹಿಸಲಿದ್ದು, ಬೇಸಿಗೆ ವೇಳಾಪಟ್ಟಿಯಲ್ಲಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸ್ಪೈಸ್‌ಜೆಟ್ ಏರ್‌ಲೈನ್ ತಿಳಿಸಿದೆ.
ವಿವಿಧ ಸ್ಪಾಟ್ ಚೆಕ್‌ಗಳು, ತಪಾಸಣೆಗಳು ಮತ್ತು ಸ್ಪೈಸ್‌ಜೆಟ್ ಸಲ್ಲಿಸಿದ ಶೋಕಾಸ್ ನೋಟಿಸ್‌ಗೆ ಉತ್ತರವಾಗಿ, ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆ ದೃಷ್ಟಿಯಿಂದ ಸ್ಪೈಸ್‌ಜೆಟ್‌ನ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಎಂಟು ವಾರಗಳ ಅವಧಿಗೆ ಈ ಅನುಮೋದನೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಆದೇಶದಲ್ಲಿ ತಿಳಿಸಿದ್ದಾರೆ.
ಸ್ಪೈಸ್ ಜೆಟ್ ಏರ್‌ಲೈನ್ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆಯನ್ನು ನೀಡುವಲ್ಲಿ ವಿಫಲವಾಗಿದೆ. ಈ ಎಂಟು ವಾರಗಳಲ್ಲಿ, ಸಂಸ್ಥೆಯ ವಿಮಾನಯಾನದ ಮೇಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೆಚ್ಚಿನ ಕಣ್ಗಾವಲು ಇರಿಸಲಿದೆ. ವಿಮಾನಯಾನಗಳ ಸಂಖ್ಯೆಯನ್ನು ಶೇ. 50ಕ್ಕಿಂತ ಹೆಚ್ಚು ಮಾಡಬೇಕಾದರೆ ಸ್ಪೈಸ್‌ಜೆಟ್, ಸುರಕ್ಷತೆಯನ್ನು ಪರಿಣಾಮವಾಗಿ ಕೈಗೊಳ್ಳಲು ಸಾಕಷ್ಟು ತಾಂತ್ರಿಕ ಬೆಂಬಲ ಹಾಗೂ ಆರ್ಥಿಕ ಸಂಪನ್ಮೂಲ ಹೊಂದಿದೆ ಎಂಬುದನ್ನು ಮಹಾನಿರ್ದೇಶನಾಲಯಕ್ಕೆ ಸಾಬೀತು ಮಾಡಬೇಕಿದೆ ಎಂದು ಹೇಳಿದೆ.
ಇದನ್ನೂ ಓದಿ:ದೆಹಲಿಯಿಂದ ಜಬಲ್ಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಗೆ.. ತುರ್ತು ಭೂಸ್ಪರ್ಶ