ನವದೆಹಲಿ: ಉತ್ತರ ಭಾರತ ಈ ಬಾರಿ ಮಹಾ ಮಳೆಗೆ ತತ್ತರಿಸಿ ಹೋಗಿದೆ. ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಂತೂ ಗುಡ್ಡ ಕುಸಿತದಿಂದ ಕಂಗಾಲಾಗಿವೆ. ಮೇಘಸ್ಫೋಟಗಳಿಗೆ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ರಾಷ್ಟ್ರ ರಾಜಧಾನಿಯಲ್ಲೂ ಆತಂಕ ಶುರುವಾಗಿದೆ. ಕಾರಣ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಮುನಾ ನದಿಯ ನೀರಿನ ಮಟ್ಟವು ಮತ್ತೊಮ್ಮೆ ಅಪಾಯದ ಮಟ್ಟವನ್ನು ಮೀರಿದೆ. ಮಂಗಳವಾರ ದೆಹಲಿಯ ಹಳೆಯ ರೈಲ್ವೆ ಸೇತುವೆ ಬಳಿ ನೀರಿನಮಟ್ಟ 205.39 ಮೀಟರ್ ತಲುಪಿದೆ.
ಕೇಂದ್ರೀಯ ಜಲ ಆಯೋಗ ಸಿಡಬ್ಲ್ಯುಸಿ ನೀಡಿರುವ ಅಂಕಿ - ಅಂಶಗಳ ಪ್ರಕಾರ ಮಂಗಳವಾರ ರಾತ್ರಿ 10 ಗಂಟೆಗೆ ನೀರಿನ ಮಟ್ಟವು 205.33 ಮೀಟರ್‌ಗಳಿಂದ 205.39 ಮೀಟರ್‌ಗಳಿಗೆ ಏರಿಕೆಯಾಗಿದ್ದು ಅಪಾಯದ ಮಟ್ಟವನ್ನು ಮೀರುವ ಸಾಧ್ಯತೆಗಳಿವೆ. ಈ ಅಂಕಿ- ಅಂಶವನ್ನು ಗಮನಿಸುವುದಾದರೆ, ನೀರಿನ ಮಟ್ಟದಲ್ಲಿ ಸ್ಥಿರವಾದ ಏರಿಕೆ ಕಂಡು ಬರುತ್ತಿದೆ. ಇದು ನದಿಯ ಅಂಚಿನಲ್ಲಿರುವ ರಾಷ್ಟ್ರ ರಾಜಧಾನಿಯ ಜನರಲ್ಲಿ ಆತಂಕ ತಂದಿದೆ.
ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಯಮುನಾ ಸೇರಿದಂತೆ ಬಹುತೇಕ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಭಾರಿ ಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ನದಿಯ ನೀರಿನ ಮಟ್ಟದಲ್ಲಿ ತ್ವರಿತವಾಗಿ ಹೆಚ್ಚಳವಾಗಲು ಕಾರಣವಾಗಿದೆ.
ನವದೆಹಲಿಯ ಹಳೆ ರೈಲ್ವೆ ಸೇತುವೆ ಬಳಿ ಮಂಗಳವಾರ ಸಂಜೆ 6 ಗಂಟೆಗೆ 204.94 ಮೀ ನೀರಿನ ಮಟ್ಟ ಇತ್ತು. ಕೇಂದ್ರಿಯ ಜಲ ಆಯೋಗದ ವರದಿ ಪ್ರಕಾರ ದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಯಮುನಾ ನೀರಿನ ಮಟ್ಟವು ಎಚ್ಚರಿಕೆ ದಾಖಲಿಸುತ್ತಿದೆ. ಇಲ್ಲಿನ ನೀರಿನ ಮಟ್ಟ 204.57 ಮೀಟರ್‌ಗೆ ಏರಿಕೆ ಕಂಡಿದೆ. ‘ಎಚ್ಚರಿಕೆ’ ಮಟ್ಟ 204.5 ಮೀಟರ್ ಇದು ಎಚ್ಚರಿಕೆ ಕರೆ ಗಂಟೆ ಆಗಿದೆ.
ಬುಧವಾರ ಬೆಳಗ್ಗೆ 5 ಗಂಟೆ ವೇಳೆಗೆ ನೀರಿನ ಮಟ್ಟ 205 ಮೀಟರ್‌ಗೆ ಏರಿಕೆಯಾಗಲಿದೆ ಎಂದು ಕೇಂದ್ರ ಜಲ ಆಯೋಗ ನಿನ್ನೆಯೇ ಎಚ್ಚರಿಕೆ ರವಾನಿಸಿದೆ. ಕಳೆದ ತಿಂಗಳು ಭಾರಿ ಮಳೆಯಿಂದಾಗಿ ಯಮುನಾ ತೀರದ ಎಲ್ಲ ಪ್ರದೇಶಗಳಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ದೆಹಲಿಯ ನಾನಾ ಪ್ರದೇಶಗಳು ಆಗ ನೀರಿನಲ್ಲಿ ಮುಳುಗಿದ್ದವು. ಇದರಿಂದ ಜನರು ಬಹಳಷ್ಟು ಸಂಕಷ್ಟ ಎದುರಿಸಿದ್ದರು. ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಜುಲೈ 13 ರಂದು ಯಮುನಾ ನದಿಯಲ್ಲಿ ಪ್ರವಾಹದ ಮಟ್ಟ 208.66 ಮೀಟರ್ ದಾಖಲಾಗಿತ್ತು. ಈ ಮೂಲಕ ರಾಷ್ಟ್ರ ರಾಜಧಾನಿ ಸಂಕಷ್ಟದಲ್ಲಿ ಮುಳುಗುವಂತಾಗಿತ್ತು. ಇದೀಗ ಮತ್ತೆ ಯಮುನೆಯಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆ ದಾಖಲಿಸುತ್ತಿದೆ. ಇದು ಮತ್ತೆ ರಾಜಧಾನಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇದನ್ನು ಓದಿ:ವರುಣನ ರುದ್ರಾವತಾರ.. ಶಿವನ ದೇವಸ್ಥಾನದ ಮೇಲೆ ಭೂ ಕುಸಿತ, 9 ಜನ ಸಾವು, 20 ಜನರು ಅವಶೇಷಗಳಡಿ ಸಿಲುಕಿರುವ ಶಂಕೆ!