ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸಂಬಂಧಿತ ಲಾಕ್ಡೌನ್ಗೆ ರಿಯಾಯಿತಿ ನೀಡಲಾಗಿದ್ದು, ಶೇ. 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಾರ್‌ಗಳನ್ನು ತೆರೆಯಲು ದೆಹಲಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕ ಉದ್ಯಾನವನಗಳು ಮತ್ತು ಗಾಲ್ಫ್ ಕ್ಲಬ್‌ಗಳನ್ನು ಪುನಃ ತೆರೆಯಲು ಅನುಮತಿ ನೀಡಿತು. ಜೂನ್ 28 ರಿಂದ ಈ ಆದೇಶ ಜಾರಿಗೆ ಬರಲಿದೆ.
Delhi Unlock: ಬಾರ್, ರೆಸ್ಟೋರೆಂಟ್ ಪುನಾರಂಭಕ್ಕೆ ಮುಹೂರ್ತ ಫಿಕ್ಸ್ - ನವದೆಹಲಿ ಬಾರ್ ಓಪನ್
ಜೂನ್ 28 ರಿಂದ ಶೇ. 50ರಷ್ಟು ಆಸನ ವ್ಯವಸ್ಥೆಯೊಂದಿಗೆ ಬಾರ್‌ಗಳು, ಸಾರ್ವಜನಿಕ ಉದ್ಯಾನವನಗಳು ಮತ್ತು ಗಾಲ್ಫ್ ಕ್ಲಬ್‌ಗಳನ್ನು ಪುನಃ ತೆರೆಯಲು ಅನುಮತಿ ನೀಡಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಹೊರಡಿಸಿರುವ ಆದೇಶದ ಪ್ರಕಾರ, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಶೇ.50 ರವರೆಗೆ ಆಸನ ಸಾಮರ್ಥ್ಯದೊಂದಿಗೆ ಬೆಳಗ್ಗೆ 8 ರಿಂದ ರಾತ್ರಿ 10ರವರೆಗೆ ಮತ್ತು ಮಧ್ಯಾಹ್ನ 12 ರಿಂದ ರಾತ್ರಿ 10 ರವರೆಗೆ ತೆರೆಯಲು ಅವಕಾಶವಿದೆ. ಹೊರಾಂಗಣ ಯೋಗ ಚಟುವಟಿಕೆಗಳಿಗೆ ಸಹ ಅನುಮತಿ ನೀಡಲಾಗಿದೆ.
ಎಲ್ಲಾ ಮಾರುಕಟ್ಟೆಗಳು, ಮಾರುಕಟ್ಟೆ ಸಂಕೀರ್ಣಗಳು ಮತ್ತು ಮಾಲ್‌ಗಳು ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳ ಗ್ರೇಡ್-1 ತತ್ಸಮಾನ ಮತ್ತು ಅದಕ್ಕಿಂತ ಹೆಚ್ಚಿನ ಅಧಿಕಾರಿಗಳು ಶೇ.100ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಎಲ್ಲಾ ಖಾಸಗಿ ಕಚೇರಿಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಶೇ. 50ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಸರಕು ಮತ್ತು ಸೇವೆಗಳ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.