ನವದೆಹಲಿ:ಇಲ್ಲಿನಶಹಬಾದ್ ಡೈರಿ ಪ್ರದೇಶದಲ್ಲಿ ಭಾನುವಾರ ಬರ್ಬರವಾಗಿ ಹತ್ಯೆಗೀಡಾದ 16 ವರ್ಷದ ಬಾಲಕಿ ಸಾಕ್ಷಿಯ ಪೋಷಕರು ಆರೋಪಿ ಸಾಹಿಲ್ ಖಾನ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ತಂದೆ, ''ರಾತ್ರಿ 8:30ಕ್ಕೆ ನನ್ನ ಮಗಳನ್ನು ಕೊಂದಿರುವ ವಿಷಯ ಗೊತ್ತಾಯಿತು. ನಮ್ಮ ಮನೆಗೆ ಬಂದ ಹುಡುಗಿಯೊಬ್ಬಳು ಮಾಹಿತಿ ನೀಡಿದಳು. ಬಹುಶಃ ಅವರಿಬ್ಬರ ನಡುವೆ ಜಗಳ ಆಗಿರಬಹುದು ಎಂದು ನಾನು ಭಾವಿಸಿದೆ. ನಾನು ಮತ್ತು ಹೆಂಡತಿ ಅಲ್ಲಿಗೆ ಹೋದಾಗ ನಮ್ಮ ಮಗಳು ತುಂಬಾ ದಯನೀಯ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆ ಕಳೆದ ಕೆಲವು ದಿನಗಳಿಂದ ನನ್ನ ಅತ್ತಿಗೆಯ ಮನೆಯಲ್ಲಿ ವಾಸಿಸುತ್ತಿದ್ದಳು. ನಾನು ಕೂಲಿ ಕೆಲಸ ಮಾಡುತ್ತೇನೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಅವಳು ಮೊದಲನೆಯವಳು. ತನ್ನ ಮಗಳನ್ನು ಕೊಂದ ಆರೋಪಿ ಬಗ್ಗೆ ನನಗೆ ತಿಳಿದಿಲ್ಲ. ನನ್ನ ಮಗಳು ಅವನ ಸ್ನೇಹಿತೆ ಎಂಬುವುದು ಕೂಡ ನನಗೆ ಗೊತ್ತಿಲ್ಲ. ನಾನು ಅವನನ್ನು ನೋಡಿಲ್ಲ. ಅವಳ ಸ್ನೇಹಿತರಲ್ಲಿ ಯಾರೊಬ್ಬರೂ ಹೇಳಲಿಲ್ಲ. ನನ್ನ ಮಗಳು ತುಂಬಾ ಒಳ್ಳೆಯ ಸ್ವಭಾವದವಳು. ಆತನಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಹೇಳಿದರು.
ಸಂತ್ರಸ್ತೆಯ ತಾಯಿ ಹೇಳಿದ್ದೇನು?:"ಬಾಲಕಿಯೊಬ್ಬಳು ಘಟನೆಯ ಬಗ್ಗೆ ನಮಗೆ ತಿಳಿಸಿದಾಗ ನನಗೆ ಆಘಾತವಾಯಿತು. ಆರಂಭದಲ್ಲಿ ನಾನು ಅವಳ ಮಾತು ನಂಬಲಿಲ್ಲ. ಆರೋಪಿ ಸಾಹಿಲ್ ಖಾನ್ ಎಂಬಾತನ್ನು ಯಾವತ್ತೂ ನೋಡಿಲ್ಲ. ನಾವು ನಮ್ಮ ಮಗಳಿಗೆ ನ್ಯಾಯ ಕೊಡಿಸುತ್ತೇವೆ" ಎಂದು ತಾಯಿ ಕಣ್ಣೀರು ಹಾಕಿದರು.
10 ಲಕ್ಷ ರೂ ಪರಿಹಾರ ಘೋಷಣೆ ಮಾಡಿ ಕೇಜ್ರಿವಾಲ್:ರಾಷ್ಟ್ರ ರಾಜಧಾನಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆಗೀಡಾದ 16 ವರ್ಷದ ಬಾಲಕಿಯ ಕುಟುಂಬಕ್ಕೆ ನಮ್ಮ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಘೋಷಿಸಿದ್ದಾರೆ.
"ಇದು ಅತ್ಯಂತ ನೋವಿನ ಘಟನೆ. ದೆಹಲಿ ಸರ್ಕಾರವು ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ನೀಡಲಿದೆ" ಎಂದು ದೆಹಲಿ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆರೋಪಿಗೆ ಕಠಿಣ ಶಿಕ್ಷೆಯಾಗುವುದನ್ನು ತಮ್ಮ ಸರ್ಕಾರ ಖಚಿತಪಡಿಸುತ್ತದೆ ಎಂದು ಕೇಜ್ರಿವಾಲ್ ಸಂತ್ರಸ್ತೆಯ ಕುಟುಂಬಕ್ಕೆ ಅವರು ಭರವಸೆ ನೀಡಿದರು.
ಆರೋಪಿ ಪೊಲೀಸರಿಗೆ ಸಿಕ್ಕಿದ್ದು ಹೇಗೆ?:ಘಟನೆಯ ನಂತರ ಆರೋಪಿ ಸಾಹಿಲ್ ಖಾನ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಬಸ್‌ನಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೊರಟಿದ್ದ. ಈತನ ಹಠಾತ್ ಆಗಮನದ ಬಗ್ಗೆ ಅವನ ಚಿಕ್ಕಮ್ಮ (ಬುವಾ) ತಂದೆಗೆ ಫೋನ್ ಮಾಡಿದ್ದರು. ಈ ಫೋನ್ ಕರೆ ಆರೋಪಿಯ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿತು. ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕಾಗಿ ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
"ಸಾಹಿಲ್ ಖಾನ್ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಬಳಿ ಬಂಧಿಸಲಾಗಿದೆ. ಆತನ ಚಿಕ್ಕಮ್ಮನಿಂದ ತಂದೆಗೆ ಬಂದ ಕರೆ ಆಧರಿಸಿ ಸ್ಥಳ ಪತ್ತೆ ಹಚ್ಚಲಾಗಿದೆ. ಸದ್ಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆತನನ್ನು ಸೋಮವಾರ ರಾತ್ರಿ ದೆಹಲಿಗೆ ಕರೆತರಲಾಗಿದೆ. ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸುತ್ತೇವೆ" ಎಂದು ದೆಹಲಿ ಪೊಲೀಸ್ ಅಧಿಕಾರಿ ದೇವೇಂದ್ರ ಪಾಠಕ್ ಹೇಳಿದ್ದಾರೆ.
ಪ್ರೇಮ ವೈಫಲ್ಯ ಹತ್ಯೆಗೆ ಕಾರಣವೇ?:ಸಂತ್ರಸ್ತೆ 2021 ರಿಂದ ಸಾಹಿಲ್ ಜತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅವರು ಆಗಾಗ ಜಗಳವಾಡುತ್ತಿದ್ದರು. ಈ ನಡುವೆ ಹಳೆಯ ಪ್ರೇಮ ಸಂಬಂಧದ ಬಗ್ಗೆ ವಿಚಾರ ಹಂಚಿಕೊಂಡಿದ್ದಳು. ಬಳಿಕ ಆಕೆ ಸಾಹಿಲ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿ, ಅವನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದಳು. ಆದರೆ ಸಾಹಿಲ್ ಅವಳನ್ನು ಸಂಪರ್ಕಿಸುತ್ತಲೇ ಇದ್ದನಂತೆ. ಮತ್ತೆ ಒಂದಾಗಲು ಬಯಸಿದ್ದನಂತೆ. ಶನಿವಾರ ಸಹ ಇದೇ ವಿಚಾರವಾಗಿ ಇಬ್ಬರು ಜಗಳವಾಡಿದ್ದರು. ಇದರಿಂದ ಅವರ ಸಂಬಂಧ ಇನ್ನಷ್ಟು ಹದಗೆಟ್ಟಿತ್ತು. ಅಂತಿಮವಾಗಿ ಆಕೆಯ ಹತ್ಯೆಗೆ ಇದು ಕಾರಣವಾಗಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆಯ ಕೈಯಲ್ಲಿ "ಪ್ರವೀಣ್" ಎಂಬ ಹೆಸರಿನ ಹಚ್ಚೆಯಿದ್ದು ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.