ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಗರಿಕ ಸೇವೆಗಳ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಹಾಗೂ ದೆಹಲಿ ಸರ್ಕಾರದ ಪರವಾಗಿ ಅಭಿಷೇಕ್ ಸಿಂಘ್ವಿ ಅವರ ಸಂಕ್ಷಿಪ್ತ ವಾದ ಆಲಿಸಿದ ನ್ಯಾಯ ಪೀಠವು 'ನಾವು ಅದನ್ನು ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸುತ್ತೇವೆ' ಎಂದು ಹೇಳಿತು. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಹಾಜರಿದ್ದರು.
ಇದನ್ನೂ ಓದಿ:ಸುಪ್ರೀಂಕೋರ್ಟ್ಗೆ ಕೇಂದ್ರ ಅಪಮಾನ ಮಾಡಿದೆ... ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇವೆ: ಕೇಜ್ರಿವಾಲ್
ಈ ಹಿಂದಿನ ವಿಚಾರಣೆ ವೇಳೆ ದೆಹಲಿಯಲ್ಲಿ ನಾಗರಿಕ ಸೇವೆಗಳ ಮೇಲಿನ ನಿಯಂತ್ರಣದ ಸುಗ್ರೀವಾಜ್ಞೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಅಲ್ಲದೇ, ದೆಹಲಿ ಸರ್ಕಾರದ ಅರ್ಜಿ ಆಧಾರದ ಮೇಲೆ ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದಾದ ಬಳಿಕ ಜುಲೈ 17ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಬಗ್ಗೆಯೂ ನ್ಯಾಯ ಪೀಠ ಮುನ್ಸೂಚನೆಯನ್ನು ನೀಡಿತ್ತು.
ದೆಹಲಿಯಲ್ಲಿ ಐಎಎಸ್ ಮತ್ತು ಕೇಡರ್ ಅಧಿಕಾರಿಗಳ ವರ್ಗಾವಣೆ ಮತ್ತು ಶಿಸ್ತು ಕ್ರಮಗಳಿಗಾಗಿ ಕೇಂದ್ರ ಸರ್ಕಾರವು ನಾಗರಿಕ ಸೇವಾ ಪ್ರಾಧಿಕಾರ ರಚಿಸಲು ಮೇ ತಿಂಗಳಲ್ಲಿ ಸುಗ್ರೀವಾಜ್ಞೆ ಪ್ರಕಟಿಸಿತ್ತು. ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕೆ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಗೆ ಸಂಬಂಧಿಸಿದ ಸೇವೆಗಳನ್ನು ಹೊರತುಪಡಿಸಿ ಸೇವೆಗಳ ನಿಯಂತ್ರಣವನ್ನು ಸುಪ್ರೀಂ ಕೋರ್ಟ್ ಹಸ್ತಾಂತರಿಸಿದ ಒಂದು ವಾರದ ನಂತರ ಈ ಸುಗ್ರೀವಾಜ್ಞೆ ಹೊರ ಬಂದಿತ್ತು. ಹೀಗಾಗಿ ಇದು ದೆಹಲಿ ಸರ್ಕಾರದ ಅಧಿಕಾರವನ್ನು ದುರ್ಬಲಗೊಳಿಸುವ ಕ್ರಮ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಆರೋಪಿಸಿದೆ. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ವಂಚನೆ ಎಂದು ಟೀಕಿಸಿದೆ.
ಈ ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕಾರ ಪಡೆದಂತೆ ತಡೆಯುವ ಪ್ರಯತ್ನದ ಭಾಗವಾಗಿ ಆಮ್ ಆದ್ಮಿ ಪಕ್ಷವು ಇತರ ಪ್ರತಿಪಕ್ಷಗಳ ನೆರವನ್ನು ಕೋರಿದೆ. ಈ ನಿಟ್ಟಿನಲ್ಲಿ ಅರವಿಂದ್ ಕೇಜ್ರಿವಾಲ್, ಈಗಾಗಲೇ ಹಲವಾರು ರಾಜಕೀಯ ನಾಯಕರನ್ನು ಭೇಟಿ ಮಾಡಿ ಸಂಸತ್ತಿನಲ್ಲಿ ತಮಗೆ ಬೆಂಬಲ ನೀಡುವಂತೆ ಮಾಡಿದ್ದಾರೆ.
ಇದನ್ನೂ ಓದಿ:ದೆಹಲಿ ಸುಗ್ರೀವಾಜ್ಞೆ ವಿರೋಧಿಸಲು ಕಾಂಗ್ರೆಸ್ ನಿರ್ಣಯ.. ಸೋನಿಯಾ ಗಾಂಧಿ ನೇತೃತ್ವದ ಸಭೆಯಲ್ಲಿ ನಿರ್ಧಾರ