ನವದೆಹಲಿ: ಭಾರತೀಯ ಜನತಾ ಪಾರ್ಟಿ ಮೇಲೆ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿಗೆ ಆಮ್ ಆದ್ಮಿ ಪಕ್ಷದ ಶಾಸಕರ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಮಸೂದೆ ಜಾರಿಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಚುನಾಯಿತ ಸರ್ಕಾರದ ಅಧಿಕಾರ ಕಸಿದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದು, ಸುಪ್ರೀಂಕೋರ್ಟ್ ಆದೇಶಕ್ಕೆ ಮರ್ಯಾದೆ ನೀಡುತ್ತಿಲ್ಲ ಎಂದಿದ್ದಾರೆ. ಲೋಕಸಭೆಯಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ(ತಿದ್ದುಪಡಿ) ಮಸೂದೆ 2021 ಕೇಂದ್ರ ಗೃಹ ಸಚಿವ ಕಿಶನ್ ರೆಡ್ಡಿ ಮಂಡನೆ ಮಾಡಿದ್ದು, ಇದೇ ವಿಚಾರವಾಗಿ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ಈ ತಿದ್ದುಪಡಿ ಮಸೂದೆ ವಿರೋಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿ ಶಾಸಕರು, ಸಂಸದರು ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ ಕೇಜ್ರಿವಾಲ್, ಆಡಳಿತರೂಡ ಪಕ್ಷದ ಅಧಿಕಾರ ಕಡಿತಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೋವಿಡ್ 2ನೇ ಅಲೆ: 24 ಗಂಟೆಯಲ್ಲಿ 23 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ!
ದೆಹಲಿ ಸರ್ಕಾರ ಎಂದರೆ ಲೆಫ್ಟಿನೆಂಟ್ ಗವರ್ನರ್ ಎಂದು ಹೇಳುವ ಕಾನೂನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಹೀಗಾದ್ರೆ ಚುನಾಯಿತ ಸಿಎಂ ಎಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಎಲ್ಲ ಫೈಲ್ಗಳು ಲೆಫ್ಟಿನೆಂಟ್ ಗವರ್ನರ್ ಬಳಿ ಹೋಗುತ್ತಿದ್ದವು. ಆದರೆ 2018ರಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ ಬಳಿಕ ಫೈಲ್ಗಳು ನಮ್ಮ ಬಳಿ ಬರುತ್ತಿದ್ದವು. ಆದರೆ ಇದೀಗ ಮತ್ತೊಂದು ಕಾನೂನು ತೆಗೆದುಕೊಂಡು ಬರುವ ಮೂಲಕ ಚುನಾಯಿತ ಪಕ್ಷದ ಮೇಲೆ ಹಕ್ಕು ಚಲಾವಣೆ ಮಾಡಲು ಮುಂದಾಗಿದೆ ಎಂದರು. ದೆಹಲಿಯಲ್ಲಿ ಕೇಂದ್ರ ಕುದುರೆ ವ್ಯಾಪಾರದ ಮೂಲಕ ಎಎಪಿ ಶಾಸಕರ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂತಹ ನಿರ್ಧಾರ ಕೈಗೊಳ್ಳುತ್ತಿದೆ ಎಂದಿದ್ದಾರೆ.