ನವದೆಹಲಿ:ತಮಿಳುನಾಡಿನ ಕೂನೂರಿನಲ್ಲಿ ನಡೆದ ವಾಯುಪಡೆಯ ಹೆಲಿಕಾಪ್ಟರ್ ದುರಂತ ಪ್ರಕರಣದ ತನಿಖೆಯನ್ನು ತನಿಖಾಧಿಕಾರಿಗಳು ಪೂರ್ಣಗೊಳಿಸಿದ್ದು, ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವರದಿಯನ್ನು ಒಪ್ಪಿಸಲಿದ್ದಾರೆ.
ದುರಂತ ನಡೆದ ದಿನದಿಂದಲೇ ಆರಂಭವಾಗಿದ್ದ ತನಿಖೆ ಒಂದು ತಿಂಗಳ ನಂತರ ಪೂರ್ಣಗೊಂಡಿದೆ. ದುರಂತ ಘಟನೆಗೆ ಕಾರಣವಾಗಿರಬಹುದಾದ ಎಲ್ಲ ಸನ್ನಿವೇಶಗಳನ್ನು ತನಿಖಾ ತಂಡವು ವಿಶ್ಲೇಷಿಸಿದೆ ಎನ್ನಲಾಗುತ್ತಿದೆ.
ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ಭಾರತೀಯ ವಾಯುಪಡೆಯ (ಐಎಎಫ್) ಉನ್ನತ ಅಧಿಕಾರಿಗಳು ತನಿಖೆ ನಡೆಸಿದ್ದು, ಈ ತಂಡವು ಹೆಲಿಕಾಪ್ಟರ್ನಲ್ಲಿ ಸಂಭವಿಸಿರಬಹುದಾದ ಮಾನವ ದೋಷ ಅಥವಾ ಹೆಲಿಕಾಪ್ಟರ್ ಲ್ಯಾಂಡಿಂಗ್ ತಯಾರಿಯಲ್ಲಿ ನಡೆದಿರಬಹುದಾದ ಸಮಸ್ಯೆಯ ಸಂಭವನೀಯ ಸನ್ನಿವೇಶಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹೆಲಿಕಾಪ್ಟರ್ ದುರಂತ ಯಾವುದೇ ತಾಂತ್ರಿಕ ದೋಷದಿಂದ ಆಗಿಲ್ಲ ಎಂದು ವಾಯಪಡೆಯ ಮೂಲಗಳು ಹೇಳಿದ್ದರೂ ಕೂಡಾ, ಅಧಿಕೃತವಾಗಿ ದೃಢೀಕರಣವಿಲ್ಲದ ಕಾರಣದಿಂದ ಈ ವಿಚಾರದ ಬಗ್ಗೆಯೂ ತನಿಖೆ ನಡೆಸಲಾಗಿದೆ.
ಕೆಲವೊಂದು ಊಹೆಗಳು, ಅಂದಾಜುಗಳು ಇದ್ದರೂ ತನಿಖಾ ಸಮಿತಿಯ ವರದಿ ಬಂದ ನಂತರವೇ ಸತ್ಯಾಂಶ ಗೊತ್ತಾಗಲಿದೆ. ಈ ವರದಿ ಇಂದು ರಾಜನಾಥ್ ಸಿಂಗ್ ಕೈ ಸೇರಲಿದ್ದು, ದುರಂತಕ್ಕೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗುವ ಸಾಧ್ಯತೆಯಿದೆ ಅಥವಾ ಕೆಲವೊಂದು ಊಹೆಗಳಲ್ಲಿಯೇ ತನಿಖಾ ವರದಿ ಮುಕ್ತಾಯವಾಗುವ ಸಾಧ್ಯತೆಯೂ ಇದೆ.
ಅಂದಹಾಗೆ ಡಿಸೆಂಬರ್ 8ರಂದು, ಭಾರತೀಯ ವಾಯುಸೇನೆ ನಿರ್ವಹಿಸುತ್ತಿದ್ದ Mi-17V-5 ಹೆಲಿಕಾಪ್ಟರ್ ಸೂಲೂರು ಏರ್ ಫೋರ್ಸ್ ಸ್ಟೇಷನ್‌ನಿಂದ ಹೊರಟು ತಮಿಳುನಾಡಿನ ಕೊಯಮತ್ತೂರು ಮತ್ತು ವೆಲ್ಲಿಂಗ್ಟನ್ ನಡುವೆ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಮಂದಿ ಹುತಾತ್ಮರಾಗಿದ್ದರು.
ಇದನ್ನೂ ಓದಿ:ಪುಲ್ವಾಮಾದಲ್ಲಿ ಉಗ್ರರು - ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ: ಮೂವರು ಉಗ್ರರ ಹತ್ಯೆ