ನವದೆಹಲಿ:ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಳ್ಳಲು ಕೇವಲ ವಾರಗಳ ಕಾಲ ಬಾಕಿ ಉಳಿದಿದೆ. ಈ ವೇಳೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ 26 ವಿಧೇಯಕ ಪರಿಚಯ ಮಾಡುವ ಸಾಧ್ಯತೆ ಇದೆ.
ಚಳಿಗಾಲದ ಅಧಿವೇಶನದಲ್ಲಿ 26 ವಿಧೇಯಕ ಮಂಡನೆಯಾಗಲಿದ್ದು, ಲೋಕಸಭೆ ವೆಬ್ಸೈಟ್ ಪ್ರಕಾರ, ನವೆಂಬರ್ 29ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಕ್ರಿಪ್ಟೋ ಹಾಗೂ ಮೂರು ಕೃಷಿ ಕಾನೂನು ರದ್ದು ಸೇರಿ ಇತರ 25 ಮಸೂದೆಗಳು ಪರಿಚಯವಾಗಲಿವೆ.
ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ, ಕೇಂದ್ರ ಸಂಸದೀಯ ಸಮಿತಿ ಹಾಗೂ ಆರ್ಬಿಐ ಗವರ್ನರ್ ನೇತೃತ್ವದಲ್ಲಿ ಅನೇಕ ಸುತ್ತಿನ ಸಭೆಗಳು ನಡೆದಿದ್ದು, ಈ ವೇಳೆ ಕ್ರಿಪ್ಟೋ ನಿಯಂತ್ರಣ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ವಿಧೇಯಕ ಪರಿಚಯ ಮಾಡಲು ಮುಂದಾಗಿದೆ.
ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ನಿಲ್ಲಿಸುವುದು ಅಸಾಧ್ಯ. ಆದರೆ ಅದರ ನಿಯಂತ್ರಣಕ್ಕೆ ಕೆಲವೊಂದಿಷ್ಟು ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬ ಮಾತು ಕೇಳಿ ಬಂದಿರುವ ಕಾರಣ ಇದೀಗ ಹೊಸದೊಂದು ಕಾಯ್ದೆ ಜಾರಿಗೆ ಬರಲಿದೆ.
Union cabinet meeting today:ಸಂಸತ್ ಅಧಿವೇಶನ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಕ್ರಿಪ್ಟೋಕರೆನ್ಸಿ ಮಸೂದೆ ಪರಿಚಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ, ಈಗಾಗಲೇ ರದ್ದುಗೊಂಡಿರುವ ಕೃಷಿ ಕಾಯ್ದೆ ರದ್ದತಿ ಮಸೂದೆ ಕೂಡ ಮಂಡನೆಯ ಬಗೆಗೂ ಚರ್ಚೆಯಾಗಲಿದೆ.
ಅಧಿವೇಶನದ ವೇಳೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೃಷಿ ಕಾಯ್ದೆ ರದ್ದತಿ ಮಸೂದೆ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕ್ರಿಪ್ಟೋಕರೆನ್ಸಿ ಮಸೂದೆ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.