ಕರ್ನಾಟಕ

karnataka

IIT Aspirant: ಐಐಟಿ ಕೋಚಿಂಗ್ ಪಡೆಯುತ್ತಿದ್ದ ಯುವಕ ಆತ್ಮಹತ್ಯೆ: ಭೇಟಿಗೆ ಬಂದಿದ್ದ ಪೋಷಕರಿಗೆ ಆಘಾತ

By

Published : Jun 12, 2023, 9:03 PM IST

ಮಹಾರಾಷ್ಟ್ರದ ಐಐಟಿ ಆಕಾಂಕ್ಷಿನೋರ್ವ ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ವಾಸವಾಗಿದ್ದ ಹಾಸ್ಟೆಲ್​ಗೆ ಪೋಷಕರು ಬಂದು ಭೇಟಿ ಮಾಡಿದ ಕೆಲ ಗಂಟೆಗಳಲ್ಲೇ ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

Etv Bharat
Etv Bharat

ಕೋಟಾ (ರಾಜಸ್ಥಾನ):ರಾಜಸ್ಥಾನದ ಕೋಟಾದಲ್ಲಿ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಕೋಚಿಂಗ್ ಪಡೆಯುತ್ತಿದ್ದ ಮಹಾರಾಷ್ಟ್ರದ 18 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತನ್ನನ್ನು ನೋಡಲು ಬಂದಿದ್ದ ಪೋಷಕರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ಭಾರ್ಗವ್ ಕೇಶವ್ ಎಂಬ ಯುವಕನೇ ಸಾವಿಗೆ ಶರಣವಾಗಿದ್ದು, ಕೋಟಾದಲ್ಲಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇಲ್ಲಿನ ಕೋಚಿಂಗ್ ಸೆಂಟರ್‌ವೊಂದಕ್ಕೆ ದಾಖಲಾಗಿದ್ದ ಭಾರ್ಗವ್ ಕಳೆದ 9 ತಿಂಗಳಿಂದ ಜವಾಹರ್ ನಗರದ ರಾಜೀವ್ ಗಾಂಧಿ ನಗರದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು.

ಇದನ್ನೂ ಓದಿ:ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮದ್ರಾಸ್​ ಐಐಟಿಯ ಪಿಹೆಚ್‌ಡಿ ವಿದ್ಯಾರ್ಥಿ

ಗಮನಾರ್ಹ ವಿಷಯ ಎಂದರೆ ಭಾರ್ಗವ್ ಪೋಷಕರು ಕೋಟಾದ ಹಾಸ್ಟೆಲ್‌ಗೆ ಆತನನ್ನು ಭೇಟಿಯಾಗಲು ಬಂದಿದ್ದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಹಾಸ್ಟೆಲ್ ತಲುಪಿ ಭಾರ್ಗವ್ ಜೊತೆ ಮಾತನಾಡಿ, ತಿಂಡಿ ತಿನ್ನಲು ಹೋಗಿದ್ದರು. ಹಿಂತಿರುಗಿ ಬರುಷ್ಟರಲ್ಲೇ ಭಾರ್ಗವ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ನಂತರ ಘಟನೆಯ ಬಗ್ಗೆ ಹಾಸ್ಟೆಲ್ ವಾರ್ಡನ್‌ಗೆ ಮಾಹಿತಿ ನೀಡಲಾಗಿದೆ. ಇದಾದ ಸ್ವಲ್ಪ ಸಮಯದ ಬಳಿಕ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಬಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್​ ನೋಟ್ ಪತ್ತೆಯಾಗಿಲ್ಲ. ಯುವಕನ ಇಂತಹ ಕಠಿಣ ಕ್ರಮಕ್ಕೆ ಕಾರಣವೇನು ಎಂಬ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಒಂದೇ ವರ್ಷದಲ್ಲಿ ಐಐಟಿ, ಎನ್‌ಐಟಿ, ಐಐಎಂ ಸಂಸ್ಥೆಯ 16 ವಿದ್ಯಾರ್ಥಿಗಳ ಆತ್ಮಹತ್ಯೆ: ಕೇಂದ್ರ ಶಿಕ್ಷಣ ಇಲಾಖೆ ಮಾಹಿತಿ

ಈ ಬಗ್ಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಅಮರ್ ಸಿಂಗ್ ರಾಥೋಡ್ ಪ್ರತಿಕ್ರಿಯಿಸಿದ್ದು, ''ಭಾರ್ಗವ್ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಕೌಟುಂಬಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಏಕೆಂದರೆ, ಆತ ತನ್ನ ಹೆತ್ತವರು ಬಂದ ಕೂಡಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ'' ಎಂದು ತಿಳಿಸಿದ್ದಾರೆ.

''ಸದ್ಯ ಕೋಚಿಂಗ್ ಸೆಂಟರ್‌ನಲ್ಲಿ ಮೃತ ಭಾರ್ಗವ್ ಹಾಜರಾತಿಯ ದಾಖಲೆಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಅಲ್ಲದೇ, ಈತನ ಸ್ನೇಹಿತರು ಮತ್ತು ಶಿಕ್ಷಕರನ್ನು ವಿಚಾರಣೆ ನಡೆಸಲಿದ್ದಾರೆ. ಹಾಸ್ಟೆಲ್ ವಾರ್ಡನ್ ಮತ್ತು ಇತರರನ್ನೂ ವಿಚಾರಣೆ ನಡೆಸಲಾಗುವುದು'' ಎಂದು ರಾಥೋಡ್ ಅವರು ವಿವರಿಸಿದ್ದಾರೆ. ಮತ್ತೊಂದೆಡೆ, ಭಾರ್ಗವ್ ನಡತೆ ಸಹಜವಾಗಿತ್ತು. ಆತ ಎಂದೂ ಅಸಹಜವಾಗಿ ಕಂಡುಬಂದಿಲ್ಲ ಎಂದು ಹಾಸ್ಟೆಲ್ ವಾರ್ಡನ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ:ಐಐಟಿ ಖರಗ್‌ಪುರ ವಿದ್ಯಾರ್ಥಿಯ ಸಾವು ಪ್ರಕರಣ: ಎರಡನೇ ಬಾರಿ ಶವಪರೀಕ್ಷೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ಆದೇಶ

ABOUT THE AUTHOR

...view details