ಮುಂಬೈ:ಕಾರ್ಯಕರ್ತ ಮತ್ತು ಸಿಪಿಐ ಹಿರಿಯ ನಾಯಕ ಗೋವಿಂದ್ ಪನ್ಸಾರೆ ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವರ್ಗಾಯಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಸೋಮವಾರ ಮುಂಬೈ ಹೈಕೋರ್ಟ್‌ಗೆ ತಿಳಿಸಿದೆ.
ಫೆಬ್ರವರಿ 16, 2015 ರಂದು ಕೊಲ್ಲಾಪುರದ ಅವರ ಮನೆಯ ಬಳಿ ಪನ್ಸಾರೆ ಮೇಲೆ ಗುಂಡು ಹಾರಿಸಲಾಗಿತ್ತು. ಅದಾದ ನಾಲ್ಕು ದಿನಗಳ ನಂತರ ಅವರು ನಿಧನರಾಗಿದ್ದರು. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಕ್ಕೆ ಹಸ್ತಾಂತರಿಸುವಂತೆ ಕೋರಿ ಪನ್ಸಾರೆ ಕುಟುಂಬ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ತನಿಖೆಯನ್ನು ಮೊದಲಿನಿಂದ ಪ್ರಾರಂಭಿಸುವ ಬದಲು ಎಟಿಎಸ್‌ನ ಕೆಲವು ಅಧಿಕಾರಿಗಳನ್ನು ಎಸ್‌ಐಟಿಯ ಭಾಗವಾಗಿ ಮಾಡಬಹುದೇ ಎಂಬ ಬಗ್ಗೆ ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿ ರೇವತಿ ಮೋಹಿತೆ - ದೇರೆ ಹಾಗೂ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರವನ್ನು ಕೇಳಿದೆ.
ಮುಚ್ಚಿದ ಕವರ್‌ನಲ್ಲಿ ವರದಿ ಸಲ್ಲಿಕೆ:ಸೋಮವಾರ ವಿಚಾರಣೆ ವೇಳೆ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ವಿಶೇಷ ವಕೀಲ ಅಶೋಕ್ ಮುಂಡರಗಿ ಅವರು ಪನ್ಸಾರೆ ಅವರ ಸಾವಿನ ಕುರಿತು ಎಸ್‌ಐಟಿ ಮಾರ್ಚ್ 30, 2021 ರಿಂದ ಇಲ್ಲಿಯವರೆಗೆ ನಡೆಸಿದ ತನಿಖೆಯ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ಸಲ್ಲಿಸಿದ್ದಾರೆ. ಪನ್ಸಾರೆ ಅವರ ಪುತ್ರಿ ಸ್ಮಿತಾ ಮತ್ತು ಸೊಸೆ ಮೇಘಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ, ಹತ್ಯೆಯಾಗಿ ಏಳು ವರ್ಷಗಳಾದರೂ ಪ್ರಕರಣದಲ್ಲಿ ರಾಜ್ಯ ಪೊಲೀಸರು ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ವಕೀಲ ಅಭಯ್ ನೇವಗಿ ತಿಳಿಸಿದರು.
ಡಾ. ನರೇಂದ್ರ ದಾಭೋಲ್ಕರ್, ಎಂಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಸೇರಿದಂತೆ ಪನ್ಸಾರೆ ಮತ್ತು ಇತರ ಕಾರ್ಯಕರ್ತರ ಹತ್ಯೆಯಲ್ಲಿ ದೊಡ್ಡ ಪಿತೂರಿ ಇದೆ. ಏಕೆಂದರೆ ಈ ಎಲ್ಲ ಪ್ರಕರಣಗಳು ಒಂದಕ್ಕೊಂದು ಸಂಬಂಧಿತವಾಗಿವೆ. ದಾಭೋಲ್ಕರ್ ಅವರ ವಿಚಾರಣೆ ಆರಂಭವಾಗಿರುವುದರಿಂದ ಆ ತನಿಖೆಯನ್ನು ವರ್ಗಾಯಿಸಲು ಸಾಧ್ಯವಿಲ್ಲ. ಆದರೆ, ಪನ್ಸಾರೆ ಅವರ ಸಾವಿನ ತನಿಖೆಯನ್ನು ಎಟಿಎಸ್‌ಗೆ ವರ್ಗಾಯಿಸಬಹುದು. ಕರ್ನಾಟಕ ಪೊಲೀಸ್ ಎಸ್‌ಐಟಿ ತನಿಖೆ ನಡೆಸುತ್ತಿರುವ ಲಂಕೇಶ್ ಮತ್ತು ಕಲಬುರ್ಗಿ ಪ್ರಕರಣಗಳು ಶೀಘ್ರದಲ್ಲೇ ತಾರ್ಕಿಕ ಅಂತ್ಯವನ್ನು ತಲುಪಲಿವೆ ಎಂದು ನೇವಗಿ ಹೇಳಿದರು.
ಈ ಪ್ರಕರಣ ಎಟಿಎಸ್‌ಗೆ ವಹಿಸುವುದು ಸೂಕ್ತ:ಎಟಿಎಸ್ ಸೂಕ್ತ ಸಂಸ್ಥೆಯಾಗಿದ್ದು, 2019 ರಲ್ಲಿ ನಲಸೋಪಾರ ಪ್ರಕರಣವನ್ನು ಭೇದಿಸಿ, ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಂದೇ ಆರೋಪಿಗಳನ್ನು ಕಂಡು ಹಿಡಿದ್ದರು. ಪನ್ಸಾರೆ ಪ್ರಕರಣವನ್ನು ಕೂಡ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬಹುದು ಎಂಬ ಭರವಸೆ ಇದೆ. ಈ ನಡುವೆ ಐವರು ಐಪಿಎಸ್ ಅಧಿಕಾರಿಗಳನ್ನು ಬದಲಾಯಿಸಿದ್ದರಿಂದ ಪನ್ಸಾರೆ ಪ್ರಕರಣದ ತನಿಖೆಗೆ ಯಾವುದೇ ಮೀಸಲಿಟ್ಟ ಅಧಿಕಾರಿಗಳ ತಂಡವೂ ಇಲ್ಲ ಎಂದು ನೇವಗಿ ಹೇಳಿದರು.