ತಿರುವನಂತಪುರಂ (ಕೇರಳ) : ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಪ್ರತಿದಿನ ಕೋವಿಡ್ ಪ್ರಕರಣಗಳು 200 ರ ಸಮೀಪ ತಲುಪಿದೆ. ನಿನ್ನೆ 172 ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ಕೇರಳ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ರಾಜ್ಯಕ್ಕೆ ಹೈಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಕರ್ನಾಟಕಕ್ಕೂ ಇದರಿಂದ ಭೀತಿ ಎದುರಾಗಿದೆ.
ಕೇರಳದಲ್ಲಿ ಒಟ್ಟು 1,026 ಸಕ್ರಿಯ ಪ್ರಕರಣಗಳಿವೆ ಮತ್ತು 111 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಕೋವಿಡ್ ಹರಡುವಿಕೆ ತಡೆಯಲು ಎಲ್ಲಾ ಜಿಲ್ಲೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಯಾವುದೇ ಕೋವಿಡ್ ಕ್ಲಸ್ಟರ್ಗಳು ರಚನೆಯಾಗಿಲ್ಲ. ಕೋವಿಡ್ -19 ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳದ ದೃಷ್ಟಿಯಿಂದ, ಐಸಿಯು ಮತ್ತು ವೆಂಟಿಲೇಟರ್ ಆಸ್ಪತ್ರೆಯ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಕೋವಿಡ್ನ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ ಸ್ವಯಂ ರಕ್ಷಣೆ ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ.
ಕೋವಿಡ್ ತಡೆಗಟ್ಟಲು ಮಾಸ್ಕ್ ಧರಿಸಬೇಕು. ಇತರೆ ಕಾಯಿಲೆ ಇರುವವರು, ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಸರಿಯಾಗಿ ಮಾಸ್ಕ್ ಧರಿಸಬೇಕು. ಆಸ್ಪತ್ರೆಗಳಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಕೇರಳ ಸೇರಿದಂತೆ ಆರು ರಾಜ್ಯಗಳಿಗೆ ಕೋವಿಡ್ ಜಾಗರೂಕ ನಿರ್ದೇಶನವನ್ನು ನೀಡಿದೆ. ಇದರ ಆಧಾರದ ಮೇಲೆ ಪರಿಶೀಲನಾ ಸಭೆ ನಡೆಸಲಾಯಿತು.