ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ ವಿ ಕೆ ಪಾಲ್ ನವದೆಹಲಿ: ದೇಶದ ಕೋವಿಡ್ ಪರಿಸ್ಥಿತಿಯ ಕುರಿತು ಉನ್ನತ ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರ ಜೊತೆ ಬುಧವಾರ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಜಾಗತಿಕವಾಗಿ ಕೊರೊನಾವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕರಾಗಿರಬೇಕು ಮತ್ತು ಕಣ್ಗಾವಲು ಬಲಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಇನ್ನೂ ಮುಗಿದಿಲ್ಲ. ಈ ಬಗ್ಗೆ ಜಾಗರೂಕರಾಗಿರಲು ಮತ್ತು ಕಣ್ಗಾವಲು ಬಲಪಡಿಸುವಂತೆ ಸಂಬಂಧಿಸಿದ ಎಲ್ಲರಿಗೂ ನಿರ್ದೇಶನ ನೀಡಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದು ಸಭೆಯ ನಂತರ ಕೇಂದ್ರ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
ಚೀನಾ, ಜಪಾನ್, ಯುಎಸ್ ಮತ್ತು ಬ್ರೆಜಿಲ್ ಸೇರಿದಂತೆ ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆಯ ವರದಿಗಳು ಬರುತ್ತಿವೆ.
ಬೆಳಗ್ಗೆ 11:30 ಕ್ಕೆ ಸಭೆ ಆರಂಭಕ್ಕೂ ಮುನ್ನ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್, ಇತರ ದೇಶಗಳಲ್ಲಿನ ಕೋವಿಡ್ -19 ಪರಿಸ್ಥಿತಿ ಮತ್ತು ಈ ನಿಟ್ಟಿನಲ್ಲಿ ಭಾರತ ಯಾವ ಕ್ರಮ ಕೈಗೊಳ್ಳಬೇಕೆಂಬುದನ್ನು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ಹೇಳಿದರು.
ಜಿನೋಮ್ ಸೀಕ್ವೆನ್ಸಿಂಗ್ ಮಾಡಲು ನಿನ್ನೆಯ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಪವಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕೇವಲ ಶೇಕಡಾ 27 ರಿಂದ 28 ಜನರು ಮಾತ್ರ ಮುನ್ನೆಚ್ಚರಿಕೆ ಡೋಸ್ ತೆಗೆದುಕೊಂಡಿದ್ದಾರೆ. ನಾವು ಇತರರಿಗೆ ವಿಶೇಷವಾಗಿ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದು ಇಂದಿನ ಸಭೆಯ ಕೊನೆಯಲ್ಲಿ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ. ಪಾಲ್ ಹೇಳಿದರು.
ಜನರು ಕಿಕ್ಕಿರಿದ ಸ್ಥಳಗಳಲ್ಲಿ, ಒಳಾಂಗಣ ಅಥವಾ ಹೊರಾಂಗಣದಲ್ಲಿ ಮಾಸ್ಕ್ ಬಳಸಬೇಕು. ಕೊಮೊರ್ಬಿಡಿಟಿ ಹೊಂದಿರುವ ಅಥವಾ ವೃದ್ಧರು ಮಾಸ್ಕ್ ಧರಿಸುವುದು ಅಗತ್ಯ ಎಂದು ಪಾಲ್ ಹೇಳಿದರು.
ಎಲ್ಲಾ ಪಾಸಿಟಿವ್ ಪ್ರಕರಣಗಳ ಸಾಧ್ಯವಾದಷ್ಟು ಮಾದರಿಗಳನ್ನು ಪ್ರತಿದಿನವೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮ್ಯಾಪ್ ಮಾಡಲಾದ, ಗೊತ್ತುಪಡಿಸಿದ INSACOG ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬೋರೇಟರೀಸ್ (IGSLs) ಗೆ ಕಳುಹಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯಗಳನ್ನು ವಿನಂತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿದರು.
ಇದನ್ನೂ ಓದಿ: ಚೀನಾದಲ್ಲಿ 3 ಕೋವಿಡ್ ಅಲೆ ಸಾಧ್ಯತೆ; ನಿಯಂತ್ರಿಸುವ ಹಿಡಿತ ಕಳೆದುಕೊಂಡ ಸರ್ಕಾರ!