ನವದೆಹಲಿ:ಜಗತ್ತಿನಾದ್ಯಂತ ಕೊರೊನಾ ತಡೆಯುವ ಸಲುವಾಗಿ ಎಲ್ಲ ರಾಷ್ಟ್ರಗಳು ಹೋರಾಡುತ್ತಿವೆ. ಈ ಬೆನ್ನಲ್ಲೇ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯೂಟಿಒ) ಮುಖ್ಯಸ್ಥ ಎನ್ಗೋಜಿ ಒಕೊಂಜೋ-ಐವಾಲಾ ಕೆಲ ಸಲಹೆಗಳನ್ನು ನೀಡಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಮತ್ತು ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳು (ಟಿಆರ್ಐಪಿಎಸ್) ಒಪ್ಪಂದಲ್ಲಿರುವ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಬೇಕೆಂದು ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ಆದಷ್ಟು ಬೇಗ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ಆದಷ್ಟು ಬೇಗ ಪರಿಷ್ಕೃತ ನಿಯಮಗಳ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಎನ್ಗೋಜಿ ಒಕೊಂಜೋ-ಐವಾಲಾ ಒತ್ತಾಯಿಸಿದ್ದಾರೆ.
ವಿಶ್ವ ವ್ಯಾಪಾರ ಸಂಘಟನೆ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಅವರು ಎನ್ಗೋಜಿ ಒಕೊಂಜೋ - ಐವಾಲಾ ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಮೇ.10 ರಿಂದ 24ರವರೆಗೆ ಸಂಪೂರ್ಣ ಲಾಕ್ಡೌನ್: ಬಿಎಸ್ವೈ ಮಹತ್ವದ ಘೋಷಣೆ
ಈ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ - ಸಂಬಂಧಿತ ಅಂಶಗಳ ಒಪ್ಪಂದದಲ್ಲಿ ಸ್ವಲ್ಪ ನಿಯಮಗಳ ಬದಲಾವಣೆಯಿಂದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ಮತ್ತು ಔಷಧ ನೀಡಲು ಸಾಧ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ - ಸಂಬಂಧಿತ ಅಂಶಗಳು ಅಥವಾ ಟಿಆರ್ಐಪಿಎಸ್ ಒಪ್ಪಂದವು ಜನವರಿ 1995ರಲ್ಲಿ ಜಾರಿಗೆ ಬಂದಿತು. ಈ ಒಪ್ಪಂದವು ಬೌದ್ಧಿಕ ಆಸ್ತಿ ಹಕ್ಕುಗಳಾದ ಹಕ್ಕುಸ್ವಾಮ್ಯ, ಪೇಟೆಂಟ್‌ಗಳು ಮತ್ತು ವ್ಯಾಪಾರ ರಹಸ್ಯಗಳನ್ನು ರಕ್ಷಿಸಲು ಇರುವ ಬಹುಪಕ್ಷೀಯ ಒಪ್ಪಂದವಾಗಿದೆ.