ನವದೆಹಲಿ:ಕೋವಿಡ್-19 ಲಸಿಕಾಕರಣದಿಂದ ಭಾರತದಲ್ಲಿ ಯುವ ವಯಸ್ಕರಲ್ಲಿ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ತಿಳಿಸಿದೆ. '' ಹಿಂದೆ, ಕುಟುಂಬಗಳಲ್ಲಿ ಕೋವಿಡ್ -19 ನಿಂದ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು, ಹಠಾತ್ ಸಾವಿನ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳವಿತ್ತು. ಇದಕ್ಕೆ ಕುಟುಂಬದಲ್ಲಿ ವಂಶಪಾರಂಪರಿಕವಾಗಿ ಬಂದಿರುವ ಆರೋಗ್ಯ ಸಮಸ್ಯೆಗಳು ಮತ್ತು ಇಂದಿನ ಬದಲಾದ ಜೀವನಶೈಲಿಯ ಅಂಶಗಳಿಂದ ಹಠಾತ್ ಸಾವಿನ ಅಪಾಯ ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ. ಆದ್ರೆ, ವ್ಯಾಕ್ಸಿನೇಷನ್ ಕೊರೊನಾ ಸೋಂಕಿನ ಅಪಾಯ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಕೋವಿಡ್-19 ಲಸಿಕೆಯು ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಐಸಿಎಂಆರ್ ಅಧ್ಯಯನ ಸ್ಪಷ್ಟಪಡಿಸಿದೆ.
ಕೋವಿಡ್ ಲಸಿಕೆ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಈ ಅಧ್ಯಯನ ಕೈಗೊಂಡಿದ್ದಾರೆ. "ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ಹಠಾತ್ ಮರಣಕ್ಕೆ ಸಂಬಂಧಿಸಿದ ಅಂಶಗಳು" ಎಂಬ ಶೀರ್ಷಿಕೆಯ ಅಧ್ಯಯನವು, ವ್ಯಾಕ್ಸಿನೇಷನ್ ಯಾವುದೇ ರೀತಿಯಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎನ್ನುವುದನ್ನು ಕಂಡುಹಿಡಿದಿದೆ.
ಐಸಿಎಂಆರ್ ಅಧ್ಯಯನವನ್ನು ಉಲ್ಲೇಖಿಸಿ ಗುಜರಾತ್‌ನಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ''ತೀವ್ರವಾದ ಕೋವಿಡ್ ಸಮಸ್ಯೆಗಳನ್ನು ಹೊಂದಿರುವ ಜನರು ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ಸಮಸ್ಯೆಗಳನ್ನು ತಡೆಯಲು ಪ್ರಯತ್ನಗಳನ್ನು ಮುಂದುವರಿಸಬೇಕು. ಅಂತಹ ಜನರು ಒಂದು ಅಥವಾ ಎರಡು ವರ್ಷಗಳ ಕಾಲ ತುಂಬಾ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸುವುದು ಮುಖ್ಯ'' ಎಂದು ಸಲಹೆ ನೀಡಿದರು.