ಶ್ರೀಹರಿಕೋಟ (ಆಂಧ್ರ ಪ್ರದೇಶ):ಜಿಎಸ್ಎಲ್ ವಿ-ಎಫ್ 10 ರಾಕೆಟ್ ಮೂಲಕ ಭೂ ಪರಿವೀಕ್ಷಣಾ ಉಪಗ್ರಹ ಇಒಎಸ್-03 (Earth observation satellite-EOS) ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಇಸ್ರೋ, ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್ಡಿಎಸ್ಸಿ) ದಲ್ಲಿ ಜಿಎಸ್ಎಲ್ವಿ ಎಫ್-10/ಇಒಎಸ್-03 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ತಿಳಿಸಿದೆ.
ಹವಾಮಾನ ಪರಿಸ್ಥಿತಿಯನ್ನು ನೋಡಿಕೊಂಡು ನಾಳೆ (ಆಗಸ್ಟ್ 12) ಬೆಳಗ್ಗೆ 5 ಗಂಟೆ 43 ನಿಮಿಷಕ್ಕೆ ಉಪಗ್ರಹ ಉಡಾವಣೆಗೆ ತಾತ್ಕಾಲಿಕ ಸಮಯ ನಿಗದಿ ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.
ಇದನ್ನೂಓದಿ: ಒಂದು ವರ್ಷದವರೆಗೆ ಕೃತಕ ಮಂಗಳ ಗೃಹದಲ್ಲಿ ವಾಸಿಸಲು ಇಲ್ಲಿದೆ ಸುವರ್ಣಾವಕಾಶ
ಕಳೆದ ಮಾರ್ಚ್ನಲ್ಲಿ ಉಪಗ್ರಹ ಉಡಾವಣೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ, ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಲಾಯಿತು. ನಂತರ ಏಪ್ರಿಲ್ -ಮೇನಲ್ಲಿ ಉಪಗ್ರಹ ಉಡಾವಣೆಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೋವಿಡ್ ಎರಡನೇ ಅಲೆಯಿಂದ ಅದೂ ಸಾಧ್ಯವಾಗಲಿಲ್ಲ. ಇದೀಗ ಮೂರನೇ ಬಾರಿಗೆ ಸಮಯ ನಿಗದಿ ಮಾಡಲಾಗಿದೆ.
ಗೇಮ್ ಚೇಂಜರ್ ಎಂದೇ ಹೇಳಲಾಗುತ್ತಿರುವ ಭೂ ಪರಿವೀಕ್ಷಣಾ ಉಪಗ್ರಹ (Earth observation satellite) ಬಾಹ್ಯಕಾಶದಿಂದ ಕಾಲ ಕಾಲಕ್ಕೆ ಸ್ಪಷ್ಟವಾದ ಚಿತ್ರಗಳನ್ನು ರವಾನಿಸಲಿದೆ. ಮುಖ್ಯವಾಗಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಇದು ಸಹಕಾರಿಯಾಗಲಿದೆ ಎಂದು ಹೇಳಲಾಗ್ತಿದೆ.