ನೀಲಗಿರಿ: ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 14 ಜನರಿದ್ದ ಐಎಎಫ್ ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ಟೇಕಾಫ್ ಆಗಿದ್ದು, ಕೂನೂರಿನಲ್ಲಿ ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಮೊದಲು ಪತನಗೊಂಡಿತ್ತು. ಆ ವೇಳೆ, ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ರಕ್ಷಣಾ ಸಿಬ್ಬಂದಿ ಸಾವಿಗೀಡಾಗಿದ್ದರು. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವಾದ ಒಂದು ದಿನದ ನಂತರ (ಡಿ.9) ಘಟನೆ ಸಂಬಂಧ ಕೂನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಪ್ರಕರಣದ ತನಿಖೆಗಾಗಿ ನೀಲಗಿರಿ ಹೆಚ್ಚುವರಿ ಎಸ್ಪಿ ಮುತ್ತುಮಾಣಿಕ್ಕಂ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ.
ಇದರ ನಡುವೆಯೇ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ರಚನೆ ಮಾಡಿದ ತಂಡ ನಿನ್ನೆ 4 ನೇ ದಿನದ ತನಿಖೆ ನಡೆಸಿದೆ. ಚಾಪರ್ ಪತನದ ಕೊನೆಯ ಕ್ಷಣದ ವಿಡಿಯೋವನ್ನು ರೆಕಾರ್ಡ್ ಮಾಡಲು ಬಳಸಲಾದ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನೀಲಗಿರಿ ಪೊಲೀಸರು ನಿನ್ನೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದರು.
ಈ ಸಂಬಂಧ ನೀಲಗಿರಿ ಪೊಲೀಸರು ಟಿಎನ್‌ಇಬಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅಪಘಾತದ ಸ್ಥಳಕ್ಕೆ ಯಾವುದೇ ಹೈ ಟ್ರಾನ್ಸ್‌ಮಿಸನ್ ಲೈನ್‌ಗಳು ಅಥವಾ ಹೈವೋಲ್ಟೇಜ್ ಕಂಬಗಳು ಹತ್ತಿರದಲ್ಲಿವೆಯೇ ಎಂಬ ವಿವರಗಳನ್ನು ಕೋರಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಸಾವು ಅಪಘಾತದ ದಿನದಂದು ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸ್ಥಳದ ಹವಾಮಾನದ ಬಗ್ಗೆ ವಿವರಗಳನ್ನು ಕೋರಿ ಚೆನ್ನೈನ ಭಾರತೀಯ ಹವಾಮಾನ ಇಲಾಖೆಗೂ ಪತ್ರ ಬರೆಯಲಾಗಿದೆ. ಹಾಗೆ ಅಪಘಾತದ ಸ್ಥಳಕ್ಕೆ ಸಮೀಪವಿರುವ ಅರಣ್ಯ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ವಿಶೇಷ ಕಾರ್ಯಪಡೆ ಸಿಬ್ಬಂದಿ ನಿಯೋಜಿಸಲಾಗಿದೆ. ಹಾಗೆ ವಿವಿಧ ಸಾಕ್ಷಿಗಳನ್ನು ವಿವಿಧ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಷೇಧಿತ ಸ್ಥಳಕ್ಕೆ ಅವರು ಏಕೆ ಹೋಗಿದ್ದರು?:
ಹೆಲಿಕಾಪ್ಟರ್ ಪತನದ ನಿಮಿಷಗಳ ಮೊದಲು ದೃಶ್ಯಾವಳಿಗಳನ್ನು ದಾಖಲಿಸಲು ಬಳಸಲಾದ ಫೋನ್ ಅನ್ನು ನೀಲಗಿರಿ ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದು, ಜನ ಸಂಚಾರ ನಿಷೇಧಿಸಿದ ದಟ್ಟ ಅರಣ್ಯಕ್ಕೆ ಆ ಜನರು ಅಲ್ಲಿಗೆ ಏಕೆ ಹೋಗಿದ್ದರು ಎಂಬುದನ್ನು ತನಿಖೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
52 ವರ್ಷದ ವ್ಯಕ್ತಿ ಜೋ ಅಲಿಯಾಸ್ ಕುಟ್ಟಿ ಅವರು ತಮ್ಮ ಸ್ನೇಹಿತ ಮತ್ತು ಕುಟುಂಬದೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಲು ಕಾಡಿಗೆ ಹೋಗಿದ್ದರು. ಆ ವೇಳೆ ಅಪಘಾತವಾದ ಹೆಲಿಕಾಪ್ಟರ್ನ ಹಾರಾಟದ ವಿಡಿಯೋವನ್ನು ಸೆರೆ ಹಿಡಿದಿದ್ದರು. ಈ ವಿಡಿಯೋ ಎಲ್ಲ ಕಡೆ ವೈರಲ್ ಕೂಡ ಆಗಿತ್ತು. ಘಟನೆ ಹಿನ್ನೆಲೆ ನೀಲಗಿರಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಜೋನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅವರ ಫೋನ್ ಅನ್ನು ಫೊರೆನ್ಸಿಕ್ ಪರೀಕ್ಷೆಗಾಗಿ ಕೊಯಮತ್ತೂರಿನ ಲ್ಯಾಬ್‌ಗೆ ಕಳುಹಿಸಿದ್ದಾರೆ.