ತಮಿಳುನಾಡು: ಇಂದು ರಾತ್ರಿ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಪೇರಂಡಪಲ್ಲಿ ಕಾಡಿಂದ ಹೆದ್ದಾರಿ ದಾಟುವ ಸಂದರ್ಭದಲ್ಲಿ ವೇಗವಾಗಿ ಬಂದ ಕಂಟೈನರ್ ಆನೆಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿಯೇ ದೈತ್ಯ ಆನೆ ಕುಸಿದುಬಿದ್ದಿದೆ.
ಸೂಳಗಿರಿ-ಹೊಸೂರು ಹೆದ್ದಾರಿಯಲ್ಲಿ ಘಟನೆ ನಡೆಸಿದ್ದು, ಒಂಟಿ ಸಲಗ ರಸ್ತೆಯಲ್ಲಿಯೇ ಕುಸಿದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿದ್ದಾರೆ, ಗಂಟೆಗಟ್ಟಲೆ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಹೆದ್ದಾರಿಯಲ್ಲಿ ಆನೆಗೆ ಕಂಟೇನರ್ ಡಿಕ್ಕಿ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಸಿಂಪಡಿಸುವುದರ ಮೂಲಕ ಆನೆಗೆ ಎಚ್ಚರ ತರಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಗೋಪಚಂದ್ರಮ್ ಬಳಿಯ ಆರ್ ಆರ್ ಟಿ ಕೇಂದ್ರಕ್ಕೆ ಚಿಕಿತ್ಸೆಗೆ ಸಾಗಿಸಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.
2018ರಲ್ಲಿಯೂ ಹೀಗೆ ಬಸ್ ಡಿಕ್ಕಿ ಹೊಡೆದು ಇದೇ ಹೆದ್ದಾರಿಯಲ್ಲಿ ಆನೆ ರಸ್ತೆಯಲ್ಲಿಯೇ ಕುಸಿದು ಬಿದ್ದಿತ್ತು. ಕಾಡಿನ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಆನೆ, ಚಿರತೆ, ಹುಲಿ, ಜಿಂಕೆ, ಕಾಡೆಮ್ಮೆಗಳಂತಹ ಕಾಡು ಪ್ರಾಣಿಗಳು ಹೆದ್ದಾರಿ ದಾಟಲು ಪರದಾಡುತ್ತಿವೆ. ಮೊನ್ನೆಯಷ್ಟೇ ರಾಷ್ಟ್ರೀಯ ಹೆದ್ದಾರಿ ದಾಟಲು ಒಂಟಿ ಆನೆ ರಾತ್ರಿ ಇಡೀ ಪರಿತಪಿಸಿದ್ದನ್ನು ನೆನಪಿಸಿಕೊಳ್ಳಬಹುದು. ಇದೀಗ ಅರಣ್ಯಾಧಿಕಾರಿಗಳೊಂದಿಗೆ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.