ಅಮೃತಸರ (ಪಂಜಾಬ್) :ಪಂಜಾಬ್ನಲ್ಲಿ ಸಯಾಮಿ ಅವಳಿಗಳು ಸರ್ಕಾರಿ ಹುದ್ದೆ ಪಡೆದು ದಾಖಲೆ ನಿರ್ಮಿಸಿದ್ದಾರೆ. ಅಮೃತಸರದ ಪಿಂಗಲ್ವಾಡದ ನಿವಾಸಿಗಳಾದ ಸಯಾಮಿ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಸರ್ಕಾರಿ ಉದ್ಯೋಗ ದಕ್ಕಿಸಿಕೊಂಡಿದ್ದಾರೆ. ಸಯಾಮಿ ಅವಳಿಗಳು ಸರ್ಕಾರಿ ಹುದ್ದೆ ಪಡೆದದ್ದು ಇದೇ ಮೊದಲು ಎಂದು ಹೇಳಲಾಗಿದೆ.
ಪಿಂಗಲ್ವಾಡ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿರುವ ಈ ಸಯಾಮಿಗಳು, ಬಳಿಕ ಐಟಿಐ ಶಿಕ್ಷಣ ಪಡೆದಿದ್ದಾರೆ. ಸರ್ಕಾರಿ ಹುದ್ದೆಗೆ ಅರ್ಜಿ ಹಾಕಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಮೇಲ್ವಿಚಾರಕ ಕೆಲಸವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಅಂದರೆ ಸೋಹ್ನಾಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದು, ಮೋಹ್ನಾ ಕೂಡ ಕೆಲಸಕ್ಕೆ ಹೋಗಬೇಕಿದೆ. ಡಿಸೆಂಬರ್ 20ರಂದು ಸೋಹ್ನಾ ಸರ್ಕಾರಿ ಕೆಲಸಕ್ಕೆ ಅಧಿಕೃತವಾಗಿ ಸೇರಿದ್ದಾರೆ.
ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಶನ್ ಲಿಮಿಟೆಡ್‌ನ ಜೂನಿಯರ್ ಎಂಜಿನಿಯರ್ ರವೀಂದರ್ ಕುಮಾರ್ ಹೇಳುವಂತೆ, ಸೋಹ್ನಾ ಮತ್ತು ಮೋಹ್ನಾಗೆ ಈ ವೃತ್ತಿಯಲ್ಲಿ ಇದ್ದ ಅನುಭವದ ಕಾರಣ ಅವರು ಈ ಕೆಲಸ ಪಡೆದಿದ್ದಾರೆ. ಉತ್ತಮ ರೀತಿಯಲ್ಲಿ ಕೆಲಸವನ್ನೂ ಅವರು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತಮಗೆ ಸರ್ಕಾರಿ ಕೆಲಸ ದೊರೆತ ಕುರಿತು ಸಂತಸ ವ್ಯಕ್ತಪಡಿಸಿರುವ ಸೋಹ್ನಾ ಮತ್ತು ಮೊಹ್ನಾ, ಈ ಅವಕಾಶ ಮಾಡಿಕೊಟ್ಟ ಪಂಜಾಬ್ ಸರ್ಕಾರ ಮತ್ತು ತಮಗೆ ಶಿಕ್ಷಣ ನೀಡಿ ಈ ಮಟ್ಟಕ್ಕೆ ಬೆಳೆಸಿದ ಪಿಂಗಲ್ವಾಡ ಸಂಸ್ಥೆಗೆ ಧನ್ಯವಾದ ಹೇಳಿದ್ದಾರೆ.