ನವದೆಹಲಿ:ಪಕ್ಷದ ನೀತಿ ನಿರ್ಧಾರಗಳ ಬಗ್ಗೆ ಹಿರಿಯ ನಾಯಕರ ಮುನಿಸು ಮುಂದುವರಿದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ ಮತ್ತು ದಿನಾಂಕ ನಿಗದಿಗಾಗಿ ಪಕ್ಷದ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಸಭೆ ಇಂದು ನಡೆಯಲಿದೆ.
ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಲಿರುವ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವರ್ಚುಯಲ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಕೂಡ ತಾಯಿಯ ಜೊತೆಗಿರಲಿದ್ದಾರೆ. ಅಧ್ಯಕ್ಷರ ಆಯ್ಕೆಯ ಕುರಿತು ಚರ್ಚಿಸುವುದೇ ಸಿಡಬ್ಲ್ಯೂಸಿ ಸಭೆಯ ಏಕೈಕ ಅಜೆಂಡಾ ಎನ್ನಲಾಗಿದೆ.
"ಎಐಸಿಸಿ ಅಧ್ಯಕ್ಷರ ಚುನಾವಣೆ ದಿನಾಂಕವನ್ನು ನಿಗದಿ ಮಾಡಲು ಆಗಸ್ಟ್ 28 ರಂದು ಮಧ್ಯಾಹ್ನ 3:30 ಕ್ಕೆ ಕಾಂಗ್ರೆಸ್ ಕಾರ್ಯಕಾರಿಯ ವರ್ಚುವಲ್ ಸಭೆ ನಡೆಯಲಿದೆ. ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಲಿದೆ" ಎಂದು ಎಐಸಿಸಿ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ರಾಜೀನಾಮೆ ನೀಡಿ ಪಕ್ಷದ ನಿರ್ಧಾರಗಳು ಮತ್ತು ರಾಹುಲ್, ಸೋನಿಯಾ ಗಾಂಧಿ ಅವರ ಬಗ್ಗೆ ಕಟುವಾಗಿ ಟೀಕಿಸಿದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಮತ್ತೊಬ್ಬ ಹಿರಿಯ ನಾಯಕ ಆನಂದ್ ಶರ್ಮಾ ಅವರು ಶನಿವಾರ ಸಂಜೆ ದೆಹಲಿಯಲ್ಲಿ ಆಜಾದ್ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದ್ದು, ಅವರೂ ಕೂಡ ಪಕ್ಷ ತೊರೆಯುವ ಬಗ್ಗೆ ಗುಸುಗುಸು ಶುರುವಾಗಿದೆ.