ಪುದುಚೇರಿ:ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಅವರ ಕಾರಿನ ಮೇಲೆ ಸ್ವಪಕ್ಷೀಯರೇ ದಾಳಿ ನಡೆಸಿದ ಘಟನೆ ಪುದುಚೇರಿಯಲ್ಲಿ ಇಂದು ನಡೆದಿದೆ. ಕಾರ್ಯಕಾರಿಣಿ ಸಭೆ ಮುಗಿಸಿ ಬರುತ್ತಿದ್ದಾಗ ಮುತ್ತಿಗೆ ಹಾಕಿದ ಕಾರ್ಯಕರ್ತರು ಗುಂಡೂರಾವ್ರನ್ನು ತಳ್ಳಾಡಿದ ಪ್ರಸಂಗವೂ ನಡೆಯಿತು.
ಇಲ್ಲಿನ ವಯ್ಯಲ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಕಾರ್ಯಕಾರಿಣಿ ಸಭೆ ನಡೆಯಿತು. ಪುದುಚೇರಿ ಮಾಜಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಸುಬ್ರಮಣಿಯನ್ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ವೇಳೆ ಪ್ರತ್ಯೇಕ ಗುಂಪೊಂದು ರಾಜ್ಯಾಧ್ಯಕ್ಷರ ಅಧಿಕಾರವಧಿ ಕುರಿತಾಗಿ ಗಲಾಟೆ ಶುರು ಮಾಡಿದೆ. ರಾಜ್ಯಾಧ್ಯಕ್ಷರ ಅಧಿಕಾರ ಅವಧಿ ಮುಗಿದಿದೆ. ಅವರನ್ನು ಬದಲಾಯಿಸಬೇಕು ಎಂದು ಪಟ್ಟು ಹಿಡಿಯಿತು. ಸಭೆಯಲ್ಲಿ ಗದ್ದಲ ಉಂಟಾದ್ದರಿಂದ ಮಾಜಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಸಭೆಯಿಂದ ಹೊರ ನಡೆದರು. ಇದರ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಅವರು ಸಭೆಯಿಂದ ಹೊರಬಂದಾಗ ಮುತ್ತಿಗೆ ಹಾಕಿದ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ದಿನೇಶ್ರನ್ನು ತಳ್ಳಾಡಿದ್ದಾರೆ.
ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ. ಅವರನ್ನು ಬದಲಿಸಬೇಕು ಎಂದು ಘೋಷಣೆ ಕೂಗುತ್ತಾ ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಎಲ್ಲರನ್ನು ಸಂತೈಸಲು ಪರದಾಡಿದ ದಿನೇಶ್ ಗುಂಡೂರಾವ್ ಅವರು ಬಳಿಕ ಹೇಗೋ ನುಸುಳಿಕೊಂಡು ಕಾರು ಹತ್ತಿದರು. ಆದರೂ ಬಿಡದ ಪಕ್ಷದ ಪದಾಧಿಕಾರಿಗಳು ಕಾರಿನ ಸುತ್ತಲೂ ಮುತ್ತಿಗೆ ಹಾಕಿ ಗಲಾಟೆ ಮಾಡಿದರು.
ಇದನ್ನೂ ಓದಿ:ಕೆಪಿಟಿಸಿಎಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಕೂಡ ಲೀಕ್? ಗದಗ ಕಾಲೇಜು ಉಪ ಪ್ರಾಚಾರ್ಯ, ಪುತ್ರನ ಬಂಧನ