ನವದೆಹಲಿ : ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಇಂದು ಎಲ್ಲಾ ರಾಜ್ಯಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಿರುವ ಸತ್ಯಾಗ್ರಹ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಇತರೆ ನಾಯಕರು ರಾಷ್ಟ್ರ ರಾಜಧಾನಿಯ ರಾಜ್‌ಘಾಟ್‌ನಲ್ಲಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ :ಲೋಕಸಭೆಯಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಮೊದಲ ಮಾಧ್ಯಮಗೋಷ್ಟಿ
ಸಂಕಲ್ಪ ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ಬಿಜೆಪಿ ರಾಹುಲ್ ಗಾಂಧಿಗೆ ಮಾತನಾಡಲು ಬಿಡುತ್ತಿಲ್ಲ. ರಾಹುಲ್ ಗಾಂಧಿಯವರು ರಾಷ್ಟ್ರಕ್ಕಾಗಿ ಮತ್ತು ಸಾರ್ವಜನಿಕರ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ" ಎಂದರು.
ಕಾಂಗ್ರೆಸ್ ಹೇಳಿಕೆ: "ರಾಹುಲ್ ಗಾಂಧಿ ಒಬ್ಬಂಟಿಯಲ್ಲ. ಲಕ್ಷಾಂತರ ಕಾಂಗ್ರೆಸ್ಸಿಗರು ಮತ್ತು ಜನರು ಅವರೊಂದಿಗೆ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಗಳು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಎಲ್ಲಾ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಒಂದು ದಿನದ ಸತ್ಯಾಗ್ರಹ ಆಯೋಜಿಸಲು ತಿಳಿಸಲಾಗಿದೆ" ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ :ನನ್ನನ್ನು ಅನರ್ಹಗೊಳಿಸಿ, ಜೈಲಿಗೆ ಹಾಕಿದರೂ ಕೂಡ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ: ರಾಹುಲ್ ಗಾಂಧಿ