ನವದೆಹಲಿ:ಪಕ್ಷದ ಸಂಘಟನೆ ಮತ್ತುಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಗುರಿ ಹಾಕಿಕೊಂಡಿರುವ ಕಾಂಗ್ರೆಸ್ ತನ್ನ ಉಸ್ತುವಾರಿ, ಕಾರ್ಯದರ್ಶಿಗಳನ್ನು ಬದಲಾವಣೆ ಮಾಡಿದೆ. ವಿಶೇಷವೆಂದರೆ ಉತ್ತರಪ್ರದೇಶ ರಾಜ್ಯದ ಉಸ್ತುವಾರಿಯಾಗಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಥಾನಕ್ಕೆ ಅವಿನಾಶ್ ಪಾಂಡೆ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯ ಎರಡು ದಿನಗಳ ನಂತರ ಈ ನೇಮಕಾತಿಗಳನ್ನು ಮಾಡಲಾಗಿದೆ. ಸಭೆಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು. ಪಕ್ಷದ ಬಲವರ್ಧನೆ ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ಹೊಸ ತಂಡ ಕಟ್ಟಲಾಗಿದೆ.
ಸಚಿನ್ ಪೈಲಟ್ಗೆ ಛತ್ತೀಸ್ಗಢ ಉಸ್ತುವಾರಿ:ಇತ್ತೀಚೆಗೆ ನಡೆದ ಛತ್ತೀಸ್ಗಢ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಅಧಿಕಾರ ಕಳೆದುಕೊಂಡ ಕಾಂಗ್ರೆಸ್, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಉತ್ತರಪ್ರದೇಶದ ಸಹ ಉಸ್ತುವಾರಿಯಾಗಿದ್ದ ಕುಮಾರಿ ಸೆಲ್ಜಾರ ಅವರಿಗೆ ಉತ್ತರಾಖಂಡದ ಉಸ್ತುವಾರಿ ಹೊಣೆ ನೀಡಲಾಗಿದೆ.
ಉತ್ತರಪ್ರದೇಶದ ಉಸ್ತುವಾರಿಯಾಗಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬದಲಿಸಿ, ಹಿರಿಯ ನಾಯಕ ಅವಿನಾಶ್ ಪಾಂಡೆಗೆ ಅವಕಾಶ ನೀಡಲಾಗಿದೆ. ಸದ್ಯ ಪ್ರಿಯಾಂಕಾ ಯಾವುದೇ ಗುರುತರ ಜವಾಬ್ದಾರಿ ಇಲ್ಲದ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.