ನವದೆಹಲಿ: ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ರಾಜ್ಯಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, "ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಕಾಂಗ್ರೆಸ್ ಎಂದಿಗೂ ಪ್ರಯತ್ನಿಸಲೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ದೇಶಕ್ಕೆ ಭದ್ರ ಬುನಾದಿ ಹಾಕಿದೆ ಎಂದು ಹೇಳಿದ್ದಾರೆ. ಆದರೆ, 60 ವರ್ಷಗಳಲ್ಲಿ ಕಾಂಗ್ರೆಸ್ ರಸ್ತೆ ಗುಂಡಿಗಳನ್ನಷ್ಟೇ ನಿರ್ಮಿಸಿದೆ" ಎಂದರು.
"ಕಾಂಗ್ರೆಸ್ ಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೆ ಅಧಿಕಾರದಲ್ಲಿದ್ದರೂ ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯೋಚಿಸಲಿಲ್ಲ. ಕನಿಷ್ಠ ಪಕ್ಷ ಪ್ರಯತ್ನವನ್ನೂ ಮಾಡಲಿಲ್ಲ. ಅವರು ಗರೀಬಿ ಹಠಾವೋ ಎಂದು ಹೇಳುತ್ತಿದ್ದರು. ಆದರೆ, ಈ ನಿಟ್ಟಿನಲ್ಲಿ ನಾಲ್ಕು ದಶಕಗಳಿಂದ ಏನನ್ನೂ ಮಾಡಲಿಲ್ಲ. ನಾವು ದೇಶದ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಶ್ರಮಿಸುತ್ತಿದ್ದೇವೆ. ತಂತ್ರಜ್ಞಾನದ ಶಕ್ತಿಯೊಂದಿಗೆ ಕೆಲಸದ ಸಂಸ್ಕೃತಿಯನ್ನು ಪರಿವರ್ತಿಸಿದ್ದೇವೆ" ಎಂದು ಪ್ರಧಾನಿ ಹೇಳಿದರು.
ನೆಹರೂ ಹೆಸರಿನ ಬಗ್ಗೆ ಯಾಕೆ ನಾಚಿಕೆ?: "ಕೆಲವರಿಗೆ ಸರ್ಕಾರದ ಯೋಜನೆಗಳ ಹೆಸರು ಮತ್ತು ಸಂಸ್ಕೃತ ಪದಗಳ ಹೆಸರುಗಳಲ್ಲಿ ಸಮಸ್ಯೆಗಳಿದ್ದವು. 600 ಸರ್ಕಾರಿ ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ವರದಿಯೊಂದನ್ನು ಓದಿದ್ದೇನೆ. ಅವರ ತಲೆಮಾರಿನವರು ನೆಹರೂ ಎಂದು ತಮ್ಮ ಉಪನಾಮವಾಗಿ ಏಕೆ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಬಗ್ಗೆ ಭಯ ಮತ್ತು ನಾಚಿಕೆ ಯಾಕೆ?" ಎಂದು ಮೋದಿ ಲೇವಡಿ ಮಾಡಿದರು.
ಸರ್ಕಾರಗಳನ್ನು ಉರುಳಿಸಿದ ಇತಿಹಾಸ: "ಅಧಿಕಾರದಲ್ಲಿದ್ದ ಯಾವ ಪಕ್ಷ ಮತ್ತು ಜನರು ಆರ್ಟಿಕಲ್ 356 ಅನ್ನು ದುರುಪಯೋಗಪಡಿಸಿಕೊಂಡಿದ್ದರು?. 90 ಬಾರಿ ಚುನಾಯಿತ ಸರ್ಕಾರಗಳನ್ನು ಉರುಳಿಸಸಲಾಗಿತ್ತು. ಅದನ್ನು ಮಾಡಿದವರು ಯಾರು?, ಪ್ರಧಾನಿಯೊಬ್ಬರು 356ನೇ ವಿಧಿಯನ್ನು 50 ಬಾರಿ ಬಳಕೆ ಮಾಡಿದ್ದಾರೆ. ಅವರ ಹೆಸರೇ ಇಂದಿರಾ ಗಾಂಧಿ. ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅದು ಪಂಡಿತ್ ನೆಹರೂಗೆ ಇಷ್ಟವಾಗಲಿಲ್ಲ. ಹೀಗಾಗಿ ಅದನ್ನು ಉರುಳಿಸಲಾಯಿತು" ಎಂದು ಮೋದಿ ಟೀಕಿಸಿದರು.