ನವದೆಹಲಿ: ದೇಶವನ್ನು ಇಂಡಿಯಾ ಬದಲಿಗೆ ಭಾರತ ಎಂದು ಮಾತ್ರ ಹೆಸರಿಸುವ ಕುರಿತು ಮಂಗಳವಾರದಿಂದ ಭಾರಿ ಚರ್ಚೆ ನಡೆಯುತ್ತಿದೆ. ಇದು ರಾಜಕೀಯ ಬಿರುಗಾಳಿಯನ್ನೂ ಎಬ್ಬಿಸಿದೆ. ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' ಎಂದು ಹೆಸರಿಟ್ಟಿರುವ ಕಾರಣ ಕೇಂದ್ರ ಸರ್ಕಾರ ದೇಶಕ್ಕೆ 'ಭಾರತ' ಎಂದು ಮರುನಾಮಕರಣ ಮಾಡಲು ಮುಂದಾಗಿದೆ ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಇದರ ನಡುವೆ ಕಾಂಗ್ರೆಸ್ ಸಂಸದ ಶಶಿ ತರೂರ್, ತಮ್ಮ ಮೈತ್ರಿಕೂಟವನ್ನು 'ಭಾರತ' ಎಂದೂ ಕರೆಯಬಹುದು ಎಂದು ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಜಿ-20 ಶೃಂಗಸಭೆ ನಡೆಯುತ್ತಿದೆ. ಈ ಶೃಂಗಸಭೆ ನಿಮಿತ್ತ ರಾಷ್ಟ್ರಪತಿಗಳು ಔತಣಕೂಟವನ್ನು ಏರ್ಪಡಿಸಿದ್ದಾರೆ. ಇದರ ಆಮಂತ್ರಣ ಪತ್ರಿಕೆಯಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದ್ದ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ' ಎಂದು ಮುದ್ರಣ ಮಾಡಿರುವುದೇ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕಾಂಗ್ರೆಸ್ ಸೇರಿ ಇತರ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಮತ್ತೊಂದೆಡೆ, ಆಳಿತಾರೂಢ ಬಿಜೆಪಿ ನಾಯಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್, ಇಂಡಿಯಾ ಹಾಗೂ ಭಾರತ ಎರಡೂ ಹೆಸರನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ಇಂದು ಬಿಜೆಪಿ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ಮಾಡಿರುವ ಅವರು, ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ದೃಷ್ಟಿಕೋನವನ್ನು ಬಿಜೆಪಿ ಬೆಂಬಲಿಸುತ್ತಿದೆ ಎಂದು ಕುಟುಕಿದ್ದಾರೆ.
''ವಿಭಜನೆಯ ಸಂದರ್ಭದಲ್ಲಿ ಜಿನ್ನಾ ಇಂಡಿಯಾ ಎಂಬ ಹೆಸರಿನ ಬಗ್ಗೆ ಆಕ್ಷೇಪಿಸಿದ್ದರು. ಏಕೆಂದರೆ, ಭಾರತವು ಬ್ರಿಟಿಷ್ ರಾಜ್‌ನ ಉತ್ತರಾಧಿಕಾರಿ ಮತ್ತು ಪಾಕಿಸ್ತಾನವು ಪ್ರತ್ಯೇಕಗೊಳ್ಳುತ್ತಿರುವ ರಾಜ್ಯ ಎಂದು ಸೂಚಿಸುತ್ತದೆ ಎಂದು ಜಿನ್ನಾ ಭಾವಿಸಿದ್ದರು. ಈ ಹಿಂದೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ)ಯಂತೆ ಬಿಜೆಪಿ ಸರ್ಕಾರ ಮತ್ತೊಮ್ಮೆ ಜಿನ್ನಾ ದೃಷ್ಟಿಕೋನ ಬೆಂಬಲಿಸುತ್ತಲೇ ಇದೆ'' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.