ಕನ್ಯಾಕುಮಾರಿ (ತಮಿಳುನಾಡು): ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯು ಭಾರತದ ಜನರನ್ನು ಧ್ವನಿ ಕೇಳುವ ಗುರಿಯನ್ನು ಹೊಂದಿದೆ. ನಾವು ಜನರ ಧ್ವನಿಯನ್ನು ಹತ್ತಿಕ್ಕಲು ಬಯಸುವುದಿಲ್ಲ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇಂದು ಮಹತ್ವದ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಮಾತ್ರವಲ್ಲ, ಲಕ್ಷಾಂತರ ಜನರು ಇಂದು ಭಾರತ್ ಜೋಡೋ ಯಾತ್ರೆಯ ಅಗತ್ಯವನ್ನು ಮನಗಂಡಿದ್ದಾರೆ. ಭಾರತವನ್ನು ಒಗ್ಗೂಡಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದೂ ಲಕ್ಷಾಂತರ ಜನರು ಭಾವಿಸಿದ್ದಾರೆ. ಜನರನ್ನು ಒಟ್ಟಿಗೆ ಸೇರಿಸುವುದು ಹಾಗೂ ಒಗ್ಗಟ್ಟಿನಿಂದ ಇರುವುದನ್ನು ಖಚಿತಪಡಿಸಿಕೊಳ್ಳುವುದೇ ಭಾರತ್ ಜೋಡೋ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೆಲ ಕಂಪನಿಗಳು ಭಾರತವನ್ನು ನಿಯಂತ್ರಿಸುತ್ತಿವೆ: ಆಗ ಒಂದು ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ನಿಯಂತ್ರಿಸುತ್ತಿತ್ತು. ಈಗ 3-4 ಕಂಪನಿಗಳು ಭಾರತವನ್ನು ನಿಯಂತ್ರಿಸುತ್ತಿವೆ. ಭಾರತವನ್ನು ವಿಭಜಿಸುವ ಮೂಲಕ ಬ್ರಿಟಿಷರು ಆಳಿದಂತೆ ಬಿಜೆಪಿ ಸರ್ಕಾರದ ಆಲೋಚನೆಯೂ ಇದೆ. ಇಂದು ಪ್ರತಿಯೊಂದು ಸಂಸ್ಥೆಯು ಆರ್‌ಎಸ್‌ಎಸ್-ಬಿಜೆಪಿಯಿಂದ ದಾಳಿಗೆ ಒಳಗಾಗಿವೆ. ಭಾರತವನ್ನು ಧಾರ್ಮಿಕ ನೆಲೆ ಹಾಗೂ ಭಾಷೆಗಳಲ್ಲಿ ವಿಭಜಿಸಬಹುದು ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿನವರು ಭಾವಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ. ಅದು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತದೆ. ತ್ರಿವರ್ಣ ಧ್ವಜವು ಸುಲಭವಾಗಿ ಬಂದಿಲ್ಲ. ಅದು ಭಾರತೀಯರು ಗಳಿಸಿದ್ದು, ಎಲ್ಲ ಧರ್ಮ ಮತ್ತು ಭಾಷೆಗೆ ತ್ರಿವರ್ಣ ಧ್ವಜ ಸೇರಿದೆ. ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಧರ್ಮ, ಭಾಷೆಯನ್ನು ಪ್ರತಿನಿಧಿಸುತ್ತದೆ. ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರೆ ಸಾಲದು. ಅದರ ಹಿಂದಿರುವ ವಿಚಾರಗಳನ್ನು ಸಮರ್ಥಿಸಿಕೊಳ್ಳುವುದು ಕೂಡ ಮುಖ್ಯ. ಆದರೆ, ಇಂದು ಈ ಧ್ವಜದ ಮೇಲೆ ದಾಳಿ ನಡೆಯುತ್ತಿದೆ. ಈ ಧ್ವಜವನ್ನು ತಮ್ಮ ವೈಯಕ್ತಿಕ ಆಸ್ತಿ ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿನವರು ತಿಳಿಸಿದುಕೊಂಡಿದ್ದಾರೆ ಎಂದರು.
ದೊಡ್ಡ ವ್ಯಾಪಾರಗಳಿಗೆ ಸಹಾಯವಾಗುವ ನೀತಿಗಳು: ಭಾರತವು ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲದೇ, ಅತ್ಯಧಿಕ ನಿರುದ್ಯೋಗವನ್ನೂ ಎದುರಿಸುತ್ತಿದೆ. ಬಿಜೆಪಿ ಆಳಿಡತದಲ್ಲಿ ದೇಶವು ದುರಂತದತ್ತ ಸಾಗುತ್ತಿದೆ. ಬಿಜೆಪಿ ಸರ್ಕಾರ ರೈತರು, ಕಾರ್ಮಿಕರು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿದೆ. ಇಂದು ಬೆರಳೆಣಿಕೆಯ ದೊಡ್ಡ ಉದ್ಯಮಗಳು ದೇಶವನ್ನು ನಿಯಂತ್ರಿಸುತ್ತವೆ ಎಂದು ಹೇಳಿದರು.