ಮಂಡ್ಯ :ಕಾಂಗ್ರೆಸ್ ನನ್ನ ಸಮಾಧಿ ತೋಡುವ ಕನಸು ಕಾಣುತ್ತಿದೆ. ಸಮಾಧಿ ತೋಡುವುದರಲ್ಲಿ ಕಾಂಗ್ರೆಸ್ ನಿರತವಾಗಿದೆ. ಆದರೆ ಮೋದಿ ಸರ್ಕಾರ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ನಿರ್ಮಾಣ ಮತ್ತು ಬಡ ಜನರ ಜೀವನವನ್ನು ಸುಗಮಗೊಳಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಮಂಡ್ಯದಲ್ಲಿ ನಡೆದ ರೋಡ್ ಶೋ ಬಳಿಕ ಗೆಜ್ಜಲಗೆರೆಯಲ್ಲಿ ಹೆದ್ದಾರಿಗೆ ಚಾಲನೆ ನೀಡಿದರು. ಬಳಿಕ ಸಾರ್ವಜನಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, 2014ಕ್ಕಿಂತ ಮೊದಲು ಕಾಂಗ್ರೆಸ್ ಸರ್ಕಾರ ಬಡವರನ್ನು ನಾಶಗೊಳಿಸುವ ಸರ್ವ ಪ್ರಯತ್ನ ಮಾಡಿತ್ತು. ಬಡವರಿಗೆ ಮೀಸಲಾಗಿದ್ದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಬಡವರು ಸರ್ಕಾರಿ ಸೌಲಭ್ಯ ಪಡೆಯುವುದು ಸುಲಭವಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿ ಸೌಲಭ್ಯಗಳು ಜನರ ಬಾಗಿಲಿಗೆ ತಲುಪುತ್ತಿದೆ. ದೇಶಾದ್ಯಂತ ಆಧುನಿಕ ಮೂಲಸೌಕರ್ಯಗಳ ಕಾರ್ಯ ಹೆಚ್ಚುತ್ತಿದ್ದು, ಕರ್ನಾಟಕ ಮತ್ತು ಭಾರತ ಬದಲಾಗುತ್ತಿದೆ. ಮೂಲ ಸೌಕರ್ಯಗಳು ಕೇವಲ ಅನುಕೂಲಕ್ಕಾಗಿ ಅಲ್ಲ. ಅದರಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೂಡಿಕೆ ಬರುತ್ತಿದೆ. ಗಳಿಕೆಯ ಸಾಧನಗಳು ಮೂಲ ಸೌಕರ್ಯಗಳ ಮೂಲಕ ಸೃಷ್ಟಿಯಾಗುತ್ತಿದೆ ಎಂದರು.
ಕನ್ನಡದಲ್ಲಿ ಮೋದಿ ಮಾತು :ಕನ್ನಡದಲ್ಲಿ ಭಾಷಣ ಶುರುಮಾಡಿದ ಪ್ರಧಾನಿ ಮೋದಿ, ಕರ್ನಾಟಕದ ಜನತೆಗೆ ನನ್ನ ನಮಸ್ಕಾರ. ಆದಿಚುಂಚನಗಿರಿ ಆಶೀರ್ವಾದ ಮತ್ತು ಕರ್ನಾಟಕದ ಬೇರೆ ಬೇರೆ ಜನರ ದರ್ಶನ ಸಿಗುತ್ತಿದೆ. ಸಕ್ಕರೆ ನಾಡಿನ ಜನರ ಆಶೀರ್ವಾದವೂ ಇರಲಿ. ಮದ್ದೂರು ಮತ್ತು ಮಂಡ್ಯ ಸಕ್ಕರೆ ನಗರ ಎಂದು ಹೇಳಿದರು. ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರು ಕರ್ನಾಟಕ ಕಂಡ ಮಹಾ ಪುರುಷರು. ಈ ಮಹನೀಯರನ್ನು ಈ ಪುಣ್ಯ ಭೂಮಿ ನಮಗೆ ನೀಡಿದೆ. ಅವರ ತಪಸ್ಸಿನ ಫಲವನ್ನು ಅನುಭವಿಸುತ್ತಿದೆ. ಇಂತಹ ಮಹಾ ಪುರುಷರ ಪ್ರೇರಣೆಯಿಂದ ಎಲ್ಲಾ ಕಾರ್ಯ ನಡೆಯುತ್ತಿವೆ ಎಂದು ಹೇಳಿದರು.
ಪ್ರಗತಿಗಾಗಿ ಡಬಲ್ ಇಂಜಿನ್ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ನಿಮ್ಮ ಋಣವನ್ನು ಬಡ್ಡಿ ಸಮೇತ ತೀರಿಸುವ ಅವಕಾಶ ನಮಗೆ ಸಿಕ್ಕಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶದ ರಸ್ತೆಗಳು ಅಭೂತಪೂರ್ವಯಾಗಿ ಅಭಿವೃದ್ಧಿಯಾಗಬೇಕು. ಬೆಂ-ಮೈ ಹೆದ್ದಾರಿಯಿಂದ ಸಂಚಾರ ಅವಧಿ ಕಡಿಮೆಯಾಗಿದೆ. ಜೊತೆಗೆ ಮೈಸೂರು-ಕುಶಾಲನಗರ ಹೆದ್ದಾರಿಗೂ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲಾ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿಗೆ ವೇಗ ಸಿಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬಿಜೆಪಿ ಸರ್ಕಾರಕ್ಕೆ ಆಶೀರ್ವಾದ ಮಾಡಿ .. ಬೊಮ್ಮಾಯಿ :ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಕ್ಕರೆ ನಾಡಿನ ಮಹಾಜನತೆಗೆ ಹೃದಯಪೂರ್ವಕ ನಮಸ್ಕಾರ. ಸಕ್ಕರೆ ಕಾರ್ಖಾನೆಯನ್ನು ಮಂಡ್ಯದಲ್ಲೇ ಸ್ಥಾಪನೆ ಮಾಡುತ್ತೇವೆ. ಇಂದು ಬೆಂಗಳೂರು ಮೈಸೂರು ಹೈವೆಯನ್ನು ಉದ್ಘಾಟನೆ ಮಾಡಲಾಗಿದೆ. ಇದು ಇಡೀ ದೇಶವನ್ನು ಸಂಪರ್ಕಿಸುತ್ತಿದೆ. ಈ ಸಾಧನೆಯನ್ನು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದರು.