ಜೈಪುರ (ರಾಜಸ್ಥಾನ) : ನಾಳೆ ನಡೆಯಲಿರುವ ರಾಜಸ್ಥಾನ ಚುನಾವಣೆಗೆ ಮುನ್ನ ರಾಜಕೀಯ ನಾಯಕರ ಮೇಲಿನ ದಾಳಿ ಮತ್ತು ಪ್ರತಿದಾಳಿಗಳ ನಡುವೆ, ಜೈಪುರದ ಕಾಂಗ್ರೆಸ್ ನಾಯಕರೊಬ್ಬರು ರಾಹುಲ್ ಗಾಂಧಿ ವಿರುದ್ಧ "ಆಕ್ಷೇಪಾರ್ಹ" ಪೋಸ್ಟ್‌ಗಳನ್ನು ಮಾಡಿದ ಮತ್ತು ಪ್ರದೇಶದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ದೂರು ದಾಖಲಿಸಿದ್ದಾರೆ. ಐಟಿ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಜಸ್ವಂತ್ ಸಿಂಗ್ ಗುರ್ಜರ್ ಅವರು ಮೇಜರ್ ಸುರೇಂದ್ರ ಸಿಂಗ್ ಪೂನಿಯಾ ವಿರುದ್ಧ ಜೈಪುರದ ಸೈಬರ್ ಸೆಲ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ. ಪೂನಿಯಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಗುರ್ಜರ್ ಆರೋಪಿಸಿದ್ದಾರೆ. ಗುರ್ಜಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸೈಬರ್ ಸ್ಟೇಷನ್ ಇನ್‌ಚಾರ್ಜ್ ಚಂದ್ರ ಪ್ರಕಾಶ್ ಪ್ರಕಾರ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ "ತಪ್ಪು, ದಾರಿತಪ್ಪಿಸುವ ಮತ್ತು ಆಕ್ಷೇಪಾರ್ಹ" ಪೋಸ್ಟ್‌ಗಳನ್ನು ಮಾಡಲಾಗಿದೆ ಎಂದು ಗುರ್ಜರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಉದಯಪುರದ ಕನ್ಹಯ್ಯಾಲಾಲ್ ಹತ್ಯೆ ಪ್ರಕರಣದ ಬಗ್ಗೆ ಆರೋಪಿ ತಪ್ಪುದಾರಿಗೆಳೆಯುವ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ದೂರಿದ್ದಾರೆ. ಚುನಾವಣೆಗೆ ಮುನ್ನ ಪೋಸ್ಟ್‌ಗಳ ಮೂಲಕ ಶಾಂತಿ ಸೌಹಾರ್ದತೆ ಕದಡುವ ದುರುದ್ದೇಶಪೂರಿತ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಕೆಣಕುವ ಪ್ರಯತ್ನಗಳು ನಡೆದಿವೆ ಎಂದು ಕಾಂಗ್ರೆಸ್ ನಾಯಕ ದೂರಿದ್ದಾರೆ'' ಎಂದು ತಿಳಿಸಿದ್ದಾರೆ.