ನವದೆಹಲಿ :ಭಾರತದ ಚುನಾವಣಾ ಆಯೋಗದ (ಇಸಿಐ) ಸದಸ್ಯರನ್ನು ಆಯ್ಕೆ ಮಾಡಲು ಹೊಸ ಸಮಿತಿಯೊಂದನ್ನು ರಚಿಸುವ ಮಸೂದೆಯನ್ನು ಸರ್ಕಾರ ಗುರುವಾರ ಮಂಡಿಸಿದೆ. ಪ್ರಧಾನಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಿಯಿಂದ ನಾಮನಿರ್ದೇಶನಗೊಂಡ ಕ್ಯಾಬಿನೆಟ್ ಸಚಿವರನ್ನು ಈ ಸಮಿತಿ ಒಳಗೊಂಡಿರಲಿದೆ.
ಮಣಿಪುರ ವಿಷಯದ ಬಗ್ಗೆ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುತ್ತಿರುವ ಮಧ್ಯೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ಮಸೂದೆಯು ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಇತರ ಚುನಾವಣಾ ಆಯುಕ್ತರ (ಇಸಿ) ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ, ಚುನಾವಣಾ ಆಯೋಗದ ವ್ಯವಹಾರದ ವಹಿವಾಟು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳನ್ನು ನಿಯಂತ್ರಿಸುತ್ತದೆ.
ಪ್ರಸ್ತುತ ಸಿಇಸಿ ಮತ್ತು ಇಸಿ ಅವರನ್ನು ಸಂವಿಧಾನದ 324 (2) ನೇ ವಿಧಿಯ ಪ್ರಕಾರ ಸರ್ಕಾರ ನೇಮಿಸುತ್ತದೆ. ಈ ಕಾಯ್ದೆ ಹೀಗಿದೆ- "ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ಒಳಗೊಂಡಿರುತ್ತದೆ. ಸಂಸತ್ತು ಆ ನಿಟ್ಟಿನಲ್ಲಿ ಮಾಡಿದ ಯಾವುದೇ ಕಾನೂನಿನ ನಿಬಂಧನೆಗಳಿಗೆ ಒಳಪಟ್ಟು ರಾಷ್ಟ್ರಪತಿಗಳು ಕಾಲಕಾಲಕ್ಕೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡಬೇಕು".
ಮಾರ್ಚ್ನಲ್ಲಿ, ಸಿಇಸಿ ಮತ್ತು ಇಸಿಗಳ ನೇಮಕಾತಿಯ ಬಗ್ಗೆ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ಉನ್ನತಾಧಿಕಾರ ಸಮಿತಿಯು ಮೂವರು ಸದಸ್ಯರ ಚುನಾವಣಾ ಆಯೋಗವನ್ನು ಆಯ್ಕೆ ಮಾಡುತ್ತದೆ ಎಂದು ತೀರ್ಪು ನೀಡಿತ್ತು. ಸಿಇಸಿ ಮತ್ತು ಇಸಿಗಳ ನೇಮಕಾತಿಯನ್ನು ನಿಯಂತ್ರಿಸುವ ಕಾನೂನನ್ನು ಸಂಸತ್ತು ಅಂಗೀಕರಿಸುವವರೆಗೆ ಇದು ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ- ಶಾಸನದ ಅನುಪಸ್ಥಿತಿಯಲ್ಲಿ, ನಾಗರಿಕ ಸೇವೆಗಳಿಂದ ಸಿಇಸಿ ಮತ್ತು ಇಸಿಗಳನ್ನು ಆಯ್ಕೆ ಮಾಡುವ ಉತ್ತಮ ಅಭ್ಯಾಸವನ್ನು ಅನುಸರಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. "ಭಾರತ ಸರ್ಕಾರದ ಕಾರ್ಯದರ್ಶಿ / ಮುಖ್ಯ ಕಾರ್ಯದರ್ಶಿಗಳ ಶ್ರೇಣಿಯ ಸೇವೆಯಲ್ಲಿರುವ / ನಿವೃತ್ತ ಅಧಿಕಾರಿಗಳ ಡೇಟಾಬೇಸ್ ಇದೆ. ಸದರಿ ಡೇಟಾಬೇಸ್ ನಿಂದ ಹೆಸರುಗಳನ್ನು ಆಯ್ಕೆ ಮಾಡಲಾಗುತ್ತದೆ. ಕಾನೂನು ಮತ್ತು ನ್ಯಾಯ ಸಚಿವರು ಡೇಟಾಬೇಸ್ನಿಂದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಹೆಸರುಗಳನ್ನು ಶಿಫಾರಸು ಮಾಡುತ್ತಾರೆ" ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.
"ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಯ ವಿಚಾರದಲ್ಲಿ ಆಯ್ಕೆ ಸಮಿತಿಯಲ್ಲಿ ಯಾವುದೇ ಹುದ್ದೆ ಖಾಲಿ ಇದ್ದಾಗ ಅಥವಾ ಯಾವುದೇ ದೋಷ ಇದ್ದ ಕಾರಣದಿಂದ ಅಂಥ ನೇಮಕ ಅಮಾನ್ಯವಾಗುವುದಿಲ್ಲ" ಎಂದು ಇಂದು ಮಂಡಿಸಲಾದ ಮಸೂದೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ನಿಮ್ಮ ಧ್ವನಿಯ ಮೂಲಕವೇ UPI Payment; ಹೊಸ ವೈಶಿಷ್ಟ್ಯ ಜಾರಿಗೆ ತರ್ತಿದೆ RBI