ಸಿದ್ದಿಪೇಟೆ (ತೆಲಂಗಾಣ):ಜಿಲ್ಲಾಧಿಕಾರಿಯ ಗನ್ ಮ್ಯಾನ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಗುಂಡಿಟ್ಟು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ನಡೆದಿದೆ. ಅಕುಲಾ ನರೇಶ್, ಈತನ ಪತ್ನಿ ಚೈತನ್ಯಾ ಹಾಗೂ ಓರ್ವ ಪುತ್ರಿ, ಪುತ್ರ ಮೃತರು.
ಮೃತ ಅಕುಲಾ ನರೇಶ್, ಸಿದ್ದಿಪೇಟೆಯ ಜಿಲ್ಲಾಧಿಕಾರಿ ಪ್ರಶಾಂತ್ ಜೀವನ್ ಪಾಟೀಲ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಚಿನ್ನಕೋಡೂರು ಮಂಡಲದ ನಿವಾಸಿಯಾದ ಇವರು ಶುಕ್ರವಾರ ಕರ್ತವ್ಯಕ್ಕೆ ಹೋಗದೆ ಮನೆಯಲ್ಲೇ ಇದ್ದರು. ಈ ವೇಳೆ, ತಮ್ಮ ಸರ್ವೀಸ್ ಪಿಸ್ತೂಲ್ನಿಂದ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಗುಂಡು ಹಾರಿಸಿ ಸಾಯಿಸಿದ್ದಾರೆ. ಬಳಿಕ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ನರೇಶ್ ಕರ್ತವ್ಯಕ್ಕೆ ಬಾರದೆ ಇದ್ದುದರಿಂದ ಅನುಮಾನಗೊಂಡ ಸಿಬ್ಬಂದಿ ಮನೆಗೆ ಭೇಟಿ ನೀಡಿದ್ದಾರೆ. ಆಗ ಮನೆಯಲ್ಲಿ ನಾಲ್ವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿವೆ. ಅಂತೆಯೇ, ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆನ್ಲೈನ್ ಬೆಟ್ಟಿಂಗ್ನಿಂದಾಗಿ ನರೇಶ್ ಸಾಲದ ಸುಳಿಗೆ ಸಿಲುಕಿದ್ದರು. ಇದೇ ವಿಚಾರವಾಗಿ ಪತಿ-ಪತ್ನಿಯರ ನಡುವೆ ಜಗಳ ನಡೆದಿದೆ. ಈ ಜಗಳ ಉಲ್ಬಣಗೊಳ್ಳುತ್ತಿದ್ದಂತೆ ನರೇಶ್ ಆಕ್ರೋಶಗೊಂಡು ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆತಂದಿದ್ದರು. ನಂತರ ಮೂವರಿಗೂ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸದ್ಯ ನರೇಶ್ ಫೋನ್ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಸಿದ್ದಿಪೇಟೆ ಸರ್ಕಲ್ ಪೊಲೀಸ್ ಶ್ವೇತಾ ತಿಳಿಸಿದ್ದಾರೆ.
ಇದನ್ನೂ ಓದಿ:ಹೈದರಾಬಾದ್: ಮಗಳೆದುರೇ ಗುಂಡು ಹಾರಿಸಿಕೊಂಡು ಸಚಿವೆಯ ಗನ್‌ಮ್ಯಾನ್ ಆತ್ಮಹತ್ಯೆ