ದುರ್ಗಾಪುರ(ಪಶ್ಚಿಮ ಬಂಗಾಳ):ಕಲ್ಲಿದ್ದಲು ವ್ಯಾಪಾರಿ ಹಾಗು ಬಿಜೆಪಿ ಮುಖಂಡ ರಾಜೇಶ್ ಅಲಿಯಾಸ್ ರಾಜು ಝಾ ಅವರನ್ನು ಶನಿವಾರ ಸಂಜೆ ಇಲ್ಲಿನ ಶಕ್ತಿಗಢದಲ್ಲಿ ಕೋಲ್ಕತ್ತಾಗೆ ತೆರಳುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಮಾಹಿತಿಯ ಪ್ರಕಾರ, ರಾಜು ಝಾ ಅವರು ತಮ್ಮ ಕಾರಿನಲ್ಲಿ ಕೋಲ್ಕತ್ತಾಗೆ ಹೋಗುತ್ತಿದ್ದಾಗ, ಶಕ್ತಿಗಢದಲ್ಲಿ ಅವರ ಕಾರಿನ ಪಕ್ಕದಲ್ಲಿ ಮತ್ತೊಂದು ವಾಹನ ಬಂದು ನಿಂತಿತು. ಕಾರಿನೊಳಗಿದ್ದ ದುಷ್ಕರ್ಮಿಗಳು ರಾಜು ಝಾ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದರು. ಮೂರು ಗುಂಡುಗಳು ರಾಜು ದೇಹ ಹೊಕ್ಕಿವೆ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಜು ಅವರ ಜೊತೆಗೆ ಕಾರಿನಲ್ಲಿದ್ದ ಬ್ರಾಟಿನ್ ಬ್ಯಾನರ್ಜಿ ಎಂಬಾತ ಪರಾರಿಯಾಗಲು ಪ್ರಯತ್ನಿಸಿದಾಗ, ಆತನಿಗೂ ಗುಂಡು ಹಾರಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬ್ಯಾನರ್ಜಿ ಅವರನ್ನು ಪೊಲೀಸರು ರಕ್ಷಿಸಿ ಬುರ್ದ್ವಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಜೆಪಿ ಮುಖಂಡ ರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬ್ರಾಟಿನ್ ಬ್ಯಾನರ್ಜಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಡರಂಗದ ಆಡಳಿತದಲ್ಲಿ ಕಲ್ಲಿದ್ದಲು- ಬ್ಲ್ಯಾಕ್ ಡೀಲಿಂಗ್ ಸಿಂಡಿಕೇಟ್‌ನ ಕಿಂಗ್‌ಪಿನ್ ಆಗಿದ್ದ ರಾಜು ಝಾ ಅವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಿದ್ದರು. ಸಾರಿಗೆ ವ್ಯವಹಾರದಿಂದ ಹೋಟೆಲ್ ಉದ್ದಿಮೆಯಲ್ಲೂ ಅವರು ತೊಡಗಿಸಿಕೊಂಡಿದ್ದರು. ಶಕ್ತಿಗಢ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು, ರಾಜು ಝಾ ಮೇಳೆ ಗುಂಡು ಹಾರಿಸಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.