ಲೋನಕ ಸರೋವರ (ಸಿಕ್ಕಿಂ): ಸಿಕ್ಕಿಂನಲ್ಲಿ ಮೇಘಸ್ಪೋಟದಿಂದ ಪ್ರವಾಹ ಉಂಟಾಗಿದೆ. ಉತ್ತರ ಸಿಕ್ಕಿಂನ ಲೋನಕ ಸರೋವರದ ಬಳಿ ಹಠಾತ್ ಮೇಘಸ್ಪೋಟ ಸಂಭವಿಸಿದ ಪರಿಣಾಮ ಇಲ್ಲಿಯ ತೀಸ್ತಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆ ಕಂಡಿದೆ ಮತ್ತು ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ದಿಢೀರ್ ಮೇಘಸ್ಫೋಟಕ್ಕೆ ಮೂವರು ಬಲಿಯಾಗಿದ್ದಾರೆ. ಏಕಾಏಕಿ ನೀರು ಹೆಚ್ಚಾದ್ದರಿಂದ ನದಿ ಪ್ರಾಂತ್ಯದಲ್ಲಿ ನಿರ್ಮಿಸಲಾಗಿದ್ದ ಸೇನಾ ನೆಲೆಗಳಿಗೂ ನೀರು ನುಗ್ಗಿವೆ. ಪ್ರವಾಹದಲ್ಲಿ 23 ಯೋಧರು ನಾಪತ್ತೆಯಾಗಿದ್ದಾರೆ. ಕೆಲ ಸೇನಾ ವಾಹನಗಳು ಕೊಚ್ಚಿಹೋಗಿವೆ ಎಂದು ವರದಿಯಾಗಿದೆ. ಆದರೆ ಇದರಲ್ಲಿ 7 ಯೋಧರ ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರವಾಹದ ಬಳಿಕ ಚುಂಗ್‌ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದರಿಂದ ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆ ಕಂಡಿದೆ. ಸದ್ಯ ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು ನಾಪತ್ತೆಯಾದ ಯೋಧರಿಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ. ತಗ್ಗು ಪ್ರದೇಶಗಳಲ್ಲಿನ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಲ್ಲಿನ ಆಡಳಿತ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ ಮೆಲ್ಲಿಯ ರಾಷ್ಟ್ರೀಯ ಹೆದ್ದಾರಿ 10 ಕೂಡ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಘಟನೆ ಬಗ್ಗೆ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಮಾತನಾಡಿದ್ದು, ಮೇಘಸ್ಪೋಟ ಸಂಭವಿಸಿದ್ದರಿಂದ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ನದಿ ಪ್ರಾಂತ್ಯದಲ್ಲಿದ್ದ ನಿರ್ಮಿಸಲಾಗಿದ್ದ ಸೇನಾ ನೆಲೆಗಳಿಗೆ ನೀರು ನುಗ್ಗಿವೆ. ಘಟನೆಯಲ್ಲಿ 23 ಯೋಧರು ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.