ನವದೆಹಲಿ:ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ) ಉದ್ದಕ್ಕೂ ಚೀನಾ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ. ಸೈನ್ಯ ಜಮಾವಣೆ ಸೇರಿದಂತೆ ಹಲವಾರು ಪ್ರಚೋದನಕಾರಿ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಆರೋಪಿಸಿದೆ.
ವಾಸ್ತವಿಕ ಗಡಿ ರೇಖೆ (ಎಲ್ಎಸಿ) ಉದ್ದಕ್ಕೂ ಭಾರತ ಫಾರ್ವರ್ಡ್ ಪಾಲಿಸಿಯನ್ನು ಅನುಸರಿಸುತ್ತಿದೆ ಎಂಬ ಚೀನಾ ಆರೋಪನ್ನು ತಿರಸ್ಕರಿಸಿದ ವಿದೇಶಾಂಗ ಇಲಾಖೆ ಚೀನಾದ ಆಕ್ರಮಣಕಾರಿ ನೀತಿಯನ್ನು ಕಟುವಾಗಿ ಟೀಕಿಸಿದೆ.
ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಚೀನಾ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಿದೆ. ಹೀಗಾಗಿ ಭಾರತ ಕೆಲವು ಪ್ರತ್ಯುತ್ತರ ಕ್ರಮಗಳನ್ನು ಕೈಗೊಳ್ಳಬೇಕಾಯಿತು ಎಂದಿದ್ದಾರೆ.
ಚೀನಾ ಆರೋಪಕ್ಕೆ ಭಾರತದ ತಿರುಗೇಟು
ಭಾರತ ಫಾರ್ವರ್ಡ್ ಪಾಲಿಸಿಯನ್ನು ಅನುಸರಿಸುತ್ತಿದೆ. ಚೀನಾ ಪ್ರದೇಶವನ್ನು ಆಕ್ರಮಿಸಲು ಎಲ್ಎಸಿಯನ್ನು ಭಾರತೀಯ ಸೇನೆ ದಾಟಿದೆ ಎಂಬ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ಮಾಡಿದ ಆರೋಪವನ್ನು ತಳ್ಳಿಹಾಕಿರುವ ಬಗ್ಚಿ ಚೀನಾ ಆರೋಪವನ್ನು ಕಟುವಾಗಿ ಟೀಕಿಸಿದ್ದಾರೆ.